ನೇಕಾರರ ಬೇಡಿಕೆಗಳ ಈಡೇರಿಕೆಗೆ ಬದ್ಧ
ಗದಗ: ರಾಜ್ಯ ಸರ್ಕಾರ ಕೈಮಗ್ಗ ನೇಕಾರರಿಂದ ಖರೀದಿ ಮಾಡುವ ಬಟ್ಟೆಯ ಬೆಲೆಯನ್ನು ಶೇ. 20ರಷ್ಟು ಹೆಚ್ಚಿಸಲು ವಿದ್ಯಾ ವಿಕಾಸ ಸಂಸ್ಥೆ ಒಪ್ಪಿಕೊಂಡಿದ್ದು, ಇದು ರಾಜ್ಯ ಸರ್ಕಾರ ನೇಕಾರರ ಕುರಿತಾಗಿ ಹೊಂದಿರುವ ಬದ್ಧತೆಗೆ ಸಾಕ್ಷಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಬೆಟಗೇರಿ ಸಮೀಪದ ನರಸಾಪುರ ಕಾಲೋನಿಯಲ್ಲಿ ಮಂಗಳವಾರ ರಾತ್ರಿ ನಡೆದ ನೇಕಾರರಿಗೆ ಡಚ್ಚ ಯೋಜನೆಯ ನೆರವಿನಿಂದ ಕಟ್ಟಿಸಿಕೊಡಲಾಗಿದ್ದ ಮನೆಗಳ ನೋಂದಣಿ ಪ್ರಮಾಣಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಕೈಮಗ್ಗ ನೇಕಾರರಿಂದಲೇ ಬಟ್ಟೆಯನ್ನು ನೇರವಾಗಿ ಸರ್ಕಾರದ ಅಧೀನ ಸಂಸ್ಥೆ ಖರೀದಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಬಡ ನೇಕಾರರಿಗೆ ನೆರವಾಗುವ ಎಲ್ಲ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ. ನೇಕಾರರು ಈವರೆಗೆ ವಾಸಿಸುತ್ತಿದ್ದ ಮನೆಗಳಿಗೆ ಅಧಿಕೃತವಾದ ಯಾವುದೇ ಹಕ್ಕು ಪತ್ರವಿರಲಿಲ್ಲ. ಆದರೆ, ರಾಜ್ಯ ಸರ್ಕಾರ ರಾಜ್ಯದ ಎಲ್ಲ ನೇಕಾರರಿಗೆ ಹಕ್ಕುಪತ್ರ ನೀಡಲು ನಿರ್ಧರಿಸಿರುವದಲ್ಲದೆ ಅವರಿಗೆ ಮುದ್ರಾಂಕ ಶುಲ್ಕವನ್ನು ಸಹ ಶೇ. 50ರಷ್ಟು ಕಡಿತಗೊಳಿಸಿದ್ದು ಕೇವಲ ರು. 1200ಗಳಲ್ಲಿ ನೇಕಾರರು ತಮ್ಮ ಮನೆಯನ್ನು ನೋಂದಣಿ ಮಾಡಿಕೊಳ್ಳಬಹುದಾಗಿದೆ. 1942ರಲ್ಲಿ ಡಚ್ಚ ಅನುದಾನದಡಿ ರಾಜ್ಯಾದ್ಯಂತ ಸುಮಾರು 1942 ಮನೆಗಳನ್ನು 1634 ವಸತಿ ಕಾರ್ಯಾಗಾರ ನಿರ್ಮಿಸಲಾಗಿತ್ತು. ಆದರೆ, ಅವುಗಳಿಗೆ ಅಧಿಕೃತವಾಗಿ ಮಾನ್ಯತೆ ದೊರೆಯಲು ಆಗುತ್ತಿರುವ ವಿಳಂಬವನ್ನು ತಪ್ಪಿಸಿರುವ ಸರ್ಕಾರ ನೇಕಾರರ ಬಹುದಿನಗಳ ಕನಸಿಗೆ ಸ್ಪಂದಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ರು. 13 ಕೋಟಿ ಭಾರವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಂಡ ನಿಲುವು ಸ್ವಾಗತಾರ್ಹವಾಗಿದೆ. ನೇಕಾರ ಬಂಧುಗಳೇ ಪ್ರಯಾಸದಿಂದ ಮನೆಯನ್ನು ಪಡೆದುಕೊಂಡಿರುವ ತಾವು ನಿಜವಾಗಿ ನನಗೆ ಉಪಕಾರ ಮಾಡಬೇಕೆಂದರೆ ಎಂತಹ ಸಂದರ್ಭದಲ್ಲೂ ನಿಮ್ಮ ಮನೆಯನ್ನು ಮತ್ತೊಬ್ಬರಿಗೆ ಮಾರಬೇಡಿ ಎಂದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಉಪವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ, ನಗರಸಭೆ ಸದಸ್ಯ ಶ್ರೀನಿವಾಸ ಕರಿ, ಅನಿಲ ಸಿಂಗಟಾಲಕೇರಿ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಮಾಜಿ ಸದಸ್ಯ ರಾಮಕೃಷ್ಣ ಪಾಂಡ್ರೆ, ರಾಮಣ್ಣ ರಾಂಪುರ, ದ್ರಾಕ್ಷಾಯಣಿ ಹಾಸಲಕರ ಮುಂತಾದವರು ಉಪಸ್ಥಿತರಿದ್ದರು.
ಕೈಮಗ್ಗ ನೇಕಾರರಿಂದಲೇ ಬಟ್ಟೆಯನ್ನು ನೇರವಾಗಿ ಸರ್ಕಾರದ ಅಧೀನ ಸಂಸ್ಥೆ ಖರೀದಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಬಡ ನೇಕಾರರಿಗೆ ನೆರವಾಗುವ ಎಲ್ಲ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಿದೆ.
-ಎಚ್.ಕೆ. ಪಾಟೀಲ