ಪುಟ್ಟರಾಜರಿಗೆ ಪುಟ್ಟರಾಜರೇ ಸಮಾನರು
ಗದಗ: ಜೋಗಿ ಜಂಗಮ ಲಿಂ. ಡಾ. ಪಂಡಿತ ಪುಟ್ಟರಾಜರ ಜೀವನ ಚರಿತ್ರೆಯ ವಿವಿಧ ಮಜಲುಗಳನ್ನು ಅವಲೋಕಿಸಿದಾಗ ಪುಟ್ಟರಾಜರಿಗೆ ಸಮಾನ ಪುಟ್ಟರಾಜರೇ ಅವರಿಗಿಂತ ಶ್ರೇಷ್ಠ ಈ ಭೂಮಿ ಮೇಲೆ ಏನೂ ಇಲ್ಲ. ಅವರಿಗೆ ಸಮಾನವಾದುದು ಅಸಾಧ್ಯ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಹೇಳಿದರು.
ಅವರು ನಗರದ ನ್ಯೂ ಎಕ್ಸಲೆಂಟ್ ಸಿಇಟಿ ಕೋಚಿಂಗ್ ಸೆಂಟರ್‌ನಲ್ಲಿ ಸೋಮವಾರ ನಾಡಕವಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ ಗದಗ ಹಾಗೂ ಸಿಜಿಬಿಎಚ್ ರಂಗಭೂಮಿ ಮಿತ್ರ ಮಂಡಳಿ ಮತ್ತು ಎಂ.ಎಸ್. ಹುಲ್ಲೂರ ಫೌಂಡೇಶನ ಟ್ರಸ್ಟ್ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪುಟ್ಟರಾಜರ 100ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನ್ಯೂ ಎಕ್ಸಲೆಂಟ್ ಸಿಇಟಿ ಸೆಂಟರ್‌ನ ನಿರ್ದೇಶಕ ಎಂ.ಎಸ್. ಹುಲ್ಲೂರ, ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸಿ.ಜಿ.ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷ ಪಿ.ಸುಬ್ರಹ್ಮಣ್ಯಂ ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮತ್ತು ರಾಜ್ಯ ಕಾರ್ಮಿಕ ಘಟಕ ಅಧ್ಯಕ್ಷ ಎಸ್.ಎಸ್. ರಡ್ಡೇರ, ಸಮಿತಿ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ, ಜಿ.ಎಚ್. ಶೋಭಾ, ದೀಪಾ ಕುರಿ, ಶೋಭಾ ಕೊಪ್ಪನ್ನವರ, ಎಂ.ಎಸ್. ಬಿಂಗಿ, ಎಂ.ಎಸ್. ಹುಲ್ಲೂರ, ರೇಣುಕಾ ನಾಯ್ಕರ, ಎನ್.ಆರ್. ಭಾಂಡಗೆ, ಎಂ.ಎಫ್. ಹೊಂಬಳ, ಲಕ್ಷ್ಮಿ ಕಾಯ್ಕದ ಮುಂತಾದವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಹವ್ಯಾಸಿ ಬರಹಗಾರ ಸಿ.ಆರ್. ಗಡಾದ ಅವರನ್ನು ಸನ್ಮಾನಿಸಲಾಯಿತು. ಉಮರಜಾನ ಢಾಲಾಯತ ಸ್ವಾಗತಿಸಿದರು. ರಂಗನಾಥ ದಾಸರ ನಿರೂಪಿಸಿದರು.