ಮಾಧ್ಯಮದವರನ್ನು ಹೊರಗಿಟ್ಟು ಬಜೆಟ್ ಸಭೆ
ಗಜೇಂದ್ರಗಡ: ಸ್ಥಳೀಯ ಪುರಸಭೆ ಕಚೇರಿಯಲ್ಲಿ ಕಡತಗಳ ಜತೆ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ವಿಪಕ್ಷಗಳು ಮಾಡುವ ಆರೋಪಕ್ಕೆ ಬುಧವಾರ ಮಾಧ್ಯಮದವರನ್ನು ಹೊರಗಿಟ್ಟು ನಡೆಸಿದ ಬಜೆಟ್ ಮೇಲಿನ ಸಾಮಾನ್ಯ ಸಭೆ ಪುಷ್ಟಿ ನೀಡಿದೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.
ಪುರಸಭೆ ಸಭಾ ಭವನದಲ್ಲಿ ಬುಧವಾರ ಅಧ್ಯಕ್ಷೆ ಕವಿತಾ ಜಾಲಿಹಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮಾಧ್ಯಮದವರನ್ನು ಹೊರಗಿಡುವ ಮೂಲಕ ಸಭೆಯಲ್ಲಿ ನಡೆಯುವ ವಿಷಯಗಳು ಜನತೆಗೆ ತಲುಪಬಾರದು ಎಂಬ ಧೋರಣೆ ಆಡಳಿತದ್ದಾಗಿದೆ. ಆಡಳಿತ ಯಂತ್ರದಲ್ಲಿ ಪಾರದರ್ಶಕತೆ ಕಂಡು ಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಸರ್ವ ಪಕ್ಷ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮ್ಮಿಷ್ಟದಂತೆ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯ ಸಭೆ, ಸಮಾರಂಭಗಳಿಗೆ ಪತ್ರಕರ್ತರನ್ನು ಕರೆಸಿ ತಾವು ಕೈಗೊಂಡ ಅಭಿವೃದ್ಧಿ ಕೆಲಸ ಕಾರ್ಯಗಳು ವಿಷಯದ ಚರ್ಚೆ, ಜನೋಪಕಾರ್ಯಗಳು ಜನರಿಗೆ ತಿಳಿಸುವುದು ನಡೆದು ಕಂಡು ಬಂದಿರುವ ಪರಂಪರೆಯನ್ನು ಈಗಿನ ಆಡಳಿತ ಮುರಿದಿದೆ. ಆಡಳಿತದಲ್ಲಿ ಪಾರದರ್ಶಕತೆ ಇರದೇ ಜನರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡಲಿದೆ ಎಂಬುದು ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಜನರಿಂದ ವಸೂಲಿ ಮಾಡಿದ ಹಣವನ್ನು ಸ್ಥಳೀಯ ಆಡಳಿತದ ನಿರ್ಲಕ್ಷ್ಯತನದಿಂದ ಕೋಟ್ಯಂತರ ಹಣ ಪೋಲಾಗುತ್ತಿದೆ ಎಂದು ಆಡಳಿತದ ವಿರುದ್ಧ ಪುರಸಭೆ ವಿರೋಧ ಪಕ್ಷದ ನಾಯಕ ಶಿವರಾಜ ಘೋರ್ಪಡೆ ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆ ಆಡಳಿತಕ್ಕೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ. ಸಭೆಯಲ್ಲಿ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜತೆಗೆ ಸಭೆಗೆ ಮಾಧ್ಯಮದವರಿಗೆ ಆಹ್ವಾನ ನೀಡದೆ ಕೆಲ ಪಟ್ಟಭದ್ರ ಹಿತಾಸಕ್ತಿಗೆ ಪಟ್ಟಣ ಅಭಿವೃದ್ಧಿಯತ್ತ ಚಿತ್ತ ಹರಿಸದೆ ಬೇಕಾಬಿಟ್ಟಿ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು. ತಮಗೆ ಇಷ್ಟ ಬಂದಾಗ ಸಭೆ ಕರೆಯುತ್ತಿರುವುದು ಹಲವು ಗುಮಾನಿಗಳಿಗೆ ಎಡೆಮಾಡಿ ಕೊಟ್ಟಿದೆ. ಇನ್ನೊಂದೆಡೆ ಪುರಸಭೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಬಹುಮತ ಇದೆ ಎನ್ನುವ ಅಹಂನಿಂದ ಆಡಳಿತ ಪಕ್ಷದವರು ದರ್ಬಾರ ನಡೆಸುತ್ತಿದ್ದಾರೆ ಎಂದು ಸಿಪಿಐಎಂ ಸದಸ್ಯ ಎಂ.ಎಸ್. ಹಡಪದ ಆರೋಪಿಸಿದರು. ಹಿಂದಿನ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕೆಲ ವಿಷಯಗಳು ಜನರ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಸಭೆಯಲ್ಲಿ ವಿರೋಧ ಪಕ್ಷಕ್ಕಿಂತ ಹೆಚ್ಚಿಗೆ ಅಧ್ಯಕ್ಷೆ ಕವಿತಾ ನಾಗರಾಜ ಜಾಲಿಹಾಳ ಸ್ವಪಕ್ಷೀಯ ಕೆಲ ಸದಸ್ಯರು ಕೇಳಿದ ಪ್ರಶ್ನೆಯಿಂದ ತಲೆ ತಗ್ಗಿಸುವಂತೆ ಹಿಂದಿನ ಸಭೆಯಲ್ಲಿ ಮಾಡಿರುವುದು ಜನರಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಸದಸ್ಯನೋರ್ವ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದಾಗ ವಿಪಕ್ಷ ಸದಸ್ಯರು ನಗುವಂತಾಗಿತ್ತು ಎಂದು ಆರೋಪಿಸಿದರು.