ಜೀವನದಲ್ಲಿ ಸಾಫಲ್ಯತೆ ಪಡೆಯಿರಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 6
ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಸಾಫಲ್ಯತೆ ಪಡೆದುಕೊಳ್ಳಬೇಕು ಎಂದು ತಾಲೂಕು ಭಾರತ ಜ್ಞಾನ-ವಿಜ್ಞಾನ ಸಮಿತಿ ಅಧ್ಯಕ್ಷ ಸಿ.ಎಸ್. ಅರಸನಾಳ ಹೇಳಿದರು.
ಅವರು ಈಚೆಗೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕೋಟೆ ಶಾಲೆಯ ಸಭಾಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ಮತ್ತು ಗದಗದ ಎಂ.ಎಸ್. ಹುಲ್ಲೂರ ಟ್ರಸ್ಟಿನ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಇವುಗಳ ಆಶ್ರಯದಲ್ಲಿ ಹಮ್ಮಿಕೊಂಡಿರುವ ಡಿ.ಇಡಿ., ಬಿ.ಇಡಿ. ಮತ್ತು ಪೊಲೀಸ್ ಮುಂತಾದ ಹುದ್ದೆಗಳ ಆಕಾಂಕ್ಷಿಗಳಿಗೆ 1 ದಿನದ ಸಿಇಟಿ ಉಚಿತ ಕೋಚಿಂಗ್ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಕಲಿತ ವಿಷಯ ಕೇವಲ ನೌಕರಿಗಾಗಿ, ಸಿಇಟಿಗಾಗಿ ಮಾತ್ರ ಉಪಯೋಗವಾಗದೇ ಎಲ್ಲ ರಂಗದಲ್ಲಿಯೂ ದಿನನಿತ್ಯ ಉಪಯೋಗವಾಗುತ್ತದೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು, ಯುವಮಿತ್ರರು ಈ ಕಾರ್ಯಾಗಾರದಲ್ಲಿ ಪಡೆದ ಜ್ಞಾನವನ್ನು ಮನನ ಮಾಡಿಕೊಂಡು ಚೆನ್ನಾಗಿ ಸಿಇಟಿ ಪರೀಕ್ಷೆ ಬರೆದು ತಮ್ಮ ಜೀವನ ಸುಂದರಗೊಳಿಸಿಕೊಳ್ಳಿ ಎಂದರು.
ಜ. ಅನ್ನದಾನೀಶ್ವರ ಡಿ.ಇಡಿ. ಕಾಲೇಜಿನ ಪ್ರಾ. ಗಿರಿಜಾ ಹಸಬಿ ಮಾತನಾಡಿದರು. ಯುವ ಮುಖಂಡ ಶೇಖರಾಜ ಹೊಸಮನಿ ಸಾಮಾನ್ಯ ಜ್ಞಾನದ ಪ್ರಶ್ನೆಯನ್ನು ಕೇಳಿ ವಿದ್ಯಾರ್ಥಿಗಳಿಂದ ಉತ್ತರ ಪಡೆಯುವ ಮೂಲಕ ಕಾರ್ಯಾಗಾರ ಉದ್ಘಾಟಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸದಸ್ಯ ಡಾ. ನಿಂಗು ಸೊಲಗಿ, ಕನ್ನಡ ಜನಾಭಿವೃದ್ಧಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ದೇವಪ್ಪ ಇಟಗಿ ಮಾತನಾಡಿದರು. ನಾಗರಾಜ ಹಾನಗಲ್ಲ, ದೇವರಾಜ ಹಡಪದ, ಎಂ.ಎಸ್. ಹುಲ್ಲೂರ, ಎಂ.ಎಸ್. ಬಂಗಿ, ಎನ್.ಕೆ. ಕೊರ್ಲಹಳ್ಳಿ, ಪೀರು ನಾಯಕ ಮುಂತಾದವರು ಇದ್ದರು. ಎಸ್.ವಿ. ಅರಿಷಣದ ಸ್ವಾಗತಿಸಿದರು. ತಾಲೂಕು ಘಟಕದ ಕಾರ್ಯದರ್ಶಿ ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು. ಶಿಕ್ಷಕ ಜೆ.ಎನ್. ಮಕಾಂದಾರ ವಂದಿಸಿದರು.