ಪರಿಶ್ರಮ, ಆತ್ಮವಿಶ್ವಾಸ ಇದ್ದರೆ ಯಶಸ್ಸು ನಿಶ್ಚಿತ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 6
ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಅನವಶ್ಯಕ ಒತ್ತಡ ಸೃಷ್ಟಿಸಿಕೊಳ್ಳುವುದು ಬೇಡ. ಸೂಕ್ತ ಸಿದ್ಧತೆಗಳೊಂದಿಗೆ ತೆರಳಿದರೆ ಉತ್ತಮ ಅಂಕ ಗಳಿಸುವುದು ಕಷ್ಟವಲ್ಲ. ಓದಲು ಅಡ್ಡಿಪಡಿಸುವ ಅಂಶಗತ್ತ ಮನಸ್ಸು ಹರಿಯದಂತೆ ಎಚ್ಚರವಹಿಸಬೇಕು ಎಂದು ಪ್ರಾಂಶುಪಾಲಕರು, ಸಹನಿರ್ದೇಶಕರು, ಜಿಲ್ಲಾ ನೋಡಲ್ ಅಧಿಕಾರಿ ಮಂಟೆಲಿಂಗಾಚಾರ್ ಹೇಳಿದರು.
ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಆಶ್ರಯದಲ್ಲಿ ಪಟ್ಟಣದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಳೆಯಿಂದಲೇ ಪರೀಕ್ಷೆ, ಇನ್ನೂ ಓದುವುದು ಮುಗಿದಿಲ್ಲ ಎಂಬ ಟೆನ್ಷನ್ ಬಿಡಿ. ಎಷ್ಟು ಓದಿದ್ದೇನೆ ಎಂಬುದಕ್ಕಿಂತ ಎಷ್ಟು ನೆನಪಿರುತ್ತದೆ ಎಂಬುದು ಮುಖ್ಯ. ಆದ್ದರಿಂದ ಪ್ರತಿ ವಿಷಯ ಅಧ್ಯಯನ ಮಾಡುವಾಗ ಅಲ್ಲಿನ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿ, ಅವುಗಳನ್ನು ಮನಸ್ಸಿನಲ್ಲಿಯೇ ಪುನರ್ಮನನ ಮಾಡಿಕೊಳ್ಳಿ. ಈ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ. ಜತೆಗೆ ಅಣಕು ಪರೀಕ್ಷೆಗಳನ್ನು ನೀವೇ ನಡೆಸಿಕೊಳ್ಳಿ ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ನಕಲು ಮಾಡುವ ಚಾಳಿ ಬೇಡ. ಕಾಪಿ ಚೀಟಿ ಬರೆದುಕೊಳ್ಳುವ ಸಮಯದಲ್ಲೇ ಗಮನವಿಟ್ಟು ಓದಿದರೆ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬಹುದು. ಅಲ್ಲದೆ, ಪರೀಕ್ಷಾ ಕೊಠಡಿಯಲ್ಲಿಯೂ ಇತರರನ್ನು ಕೇಳುವುದು ಅಥವಾ ಸಂಜ್ಞೆಯ ಮೂಲಕ ತಿಳಿದುಕೊಳ್ಳಲು ಹೋಗಬೇಡಿ. ಇದು ನಿಮ್ಮ ಪರೀಕ್ಷೆ ಬರೆಯುವ ಏಕಾಗ್ರತೆಗೆ ಭಂಗ ತರುತ್ತದೆ ಎಂದು ಸಲಹೆ ನೀಡಿದ ಅವರು, ಪರೀಕ್ಷೆಗೂ ಮುಂಚೆ ಸ್ನೇಹಿತರೊಂದಿಗೆ ವಿಷಯ ಕುರಿತು ಚರ್ಚಿಸಲು ಹೋಗಬೇಡಿ. ಇದು ನಿಮ್ಮಲ್ಲಿ ಗೊಂದಲ ಮೂಡಿಸಿ ವಿಷಯವನ್ನೇ ಮರೆಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇಲ್ಲಿ ಗಳಿಸುವ ಫಲಿತಾಂಶಕ್ಕೆ ಅವರ ಭವಿಷ್ಯವನ್ನೇ ನಿರ್ಧರಿಸುವ ಶಕ್ತಿ ಇರುವುದರಿಂದ ಒತ್ತಡ ಸಹಜ. ಪ್ರಾಮಾಣಿಕವಾಗಿ, ನಿರ್ಭಯವಾಗಿ, ಆತ್ಮವಿಶ್ವಾಸ, ನಂಬಿಕೆ ಸಮಯ ಪ್ರಜ್ಞೆ ಗಮನಿಸಿ ನೀವು ಓದಿರುವುದನ್ನು ಸರಿಯಾಗಿ ಬರೆದರೆ ಪರೀಕ್ಷೆ ಉತ್ತಮವಾಗಿ ಸಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆರೋಗ್ಯ ಹದಗೆಟ್ಟು ಪರೀಕ್ಷೆ ಬರೆಯಲು ತೊಂದರೆಯಾದರೆ ನೀವು ವರ್ಷವಿಡಿ ಪಟ್ಟ ಶ್ರಮ ವ್ಯರ್ಥವಾದಂತೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳುವತ್ತ ಮಕ್ಕಳು ಗಮನ ಹರಿಸಬೇಕು. ಅತಿಯಾಗಿ ನಿದ್ರೆಗೆಡುವುದು ಒಳ್ಳೆಯದಲ್ಲ. ಅಗತ್ಯವಿರುವಷ್ಟು ನಿದ್ರಿಸಿ. ಪಾಲಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದು ಬಹಳ ಮುಖ್ಯ ಎಂದು ತಿಳಿಸಿದರು. ಸಿಡಿಪಿಒ ಸರಸ್ವತಿ ಹೊನ್ನೇಗೌಡರ, ಕೆ.ಎ. ಬಳಿಗೇರ, ಮೋಹನ ಸಂಕದಾಳ, ವಿ.ಪಿ. ಮನ್ಸೂರ, ಅಶೋಕ ಹರ್ಲಾಪುರ, ಈರಕ್ಕನವರ, ಉಮೇಶ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.