ಪರೀಕ್ಷೆ ಸಮಯದಲ್ಲಿ ವಿಷಯಗಳತ್ತ ಗಮನಹರಿಸಿ
ಮುಂಡರಗಿ: ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳು ಪ್ರಾರಂಭವಾದಾಗಿನಿಂದಲೂ ಎಲ್ಲ ವಿಷಯಗಳ ಕುರಿತು ಅಭ್ಯಾಸ ಮಾಡುತ್ತ ಬರುವುದು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಹಾಗಂತ ಪರೀಕ್ಷೆ ಸಮಯದಲ್ಲಿ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಸಮಯದಲ್ಲಿಯೇ ಮತ್ತೊಮ್ಮೆ ಎಲ್ಲ ವಿಷಯಗಳ ಕುರಿತು ಹೆಚ್ಚು ಗಮನಹರಿಸಬೇಕು ಎಂದು ಜ.ಅನ್ನದಾನ ಸಂಯುಕ್ತ ಪಪೂ ಕಾಲೇಜಿನ ಪ್ರಾ. ವಿ.ಎಫ್. ಅಂಗಡಿ ಹೇಳಿದರು.
ಅವರು ಈಚೆಗೆ ಪಟ್ಟಣದ ಜ. ಅನ್ನದಾನೀಶ್ವರ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಹಿಂದಿ ವಿಷಯದ 1 ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಿಂದಿ ಭಾಷೆಯು ನಮ್ಮ ರಾಷ್ಟ್ರೀಯ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಅದನ್ನು ಓದಲು, ಬರೆಯಲು ಕಲಿಯುವುದು ಅವಶ್ಯವಾಗಿದೆ. ವಿದ್ಯಾರ್ಥಿಗಳು, ಹಿಂದಿ, ಗಣಿತ, ಇಂಗ್ಲಿಷ್‌ನಂತಹ ವಿಷಯಗಳ ಬಗ್ಗೆ ಗಮನಹರಿಸಿ ಎಂದರು.
ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಹಿಂದಿ ವಿಷಯದಲ್ಲಿ 100ಕ್ಕೆ 90 ಅಂಕ ಪಡೆದಿರುವ ಸುಷ್ಮಾ ಅರಿಸಿನದ ಹಾಗೂ ಅನಿತಾರಾವ್ ಅವರಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಕಾರ್ಯಾಗಾರ ಜರುಗಿತು. ಈ ಕಾರ್ಯಾಗಾರದಲ್ಲಿ ಭೀಮರಾವ್ ಕಟ್ಟಿಮನಿ ವಿದ್ಯಾರ್ಥಿಗಳಿಗೆ ಹಿಂದಿ ವಿಷಯದ ಕುರಿತು ತರಬೇತಿ ನೀಡಿದರು.