ಯುವಕರು ರಾಜಕಾರಣ ವ್ಯವಸ್ಥೆ ತಿದ್ದಲಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 6
ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಯುವಕರು ರಾಜಕಾರಣದ ವ್ಯವಸ್ಥೆ ತಿದ್ದುವ ಮೂಲಕ ಸುಂದರ ಭಾರತ ನಿರ್ಮಾಣ ಮಾಡಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು.
ಅವರು ಗುರುವಾರ ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದ ಎಸ್. ಶಿವರಾಮ್ ವೇದಿಕೆಯಲ್ಲಿ ಡಿವೈಎಫ್ಐನ 10ನೇ ರಾಜ್ಯ ಯುವಜನ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯುವಕರು ಜಾಗ್ರತೆ ಅಗತ್ಯ: ಹಿಂದಿನ ರಾಜಕೀಯ ವ್ಯವಸ್ಥೆಗೂ ಈಗಿರುವ ರಾಜಕೀಯ ವ್ಯವಸ್ಥೆಯು ತುಂಬಾ ಬದಲಾಗಿದೆ. ಇಂದು ರಾಜಕೀಯದಲ್ಲಿ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಇದು ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಅಲ್ಲದೇ ಯುವಕರೂ ಈ ರಾಜಕೀಯ ಪರಿಸ್ಥಿತಿಯ ಅನುಗುಣವಾಗಿ ಹೊಂದಿಕೊಂಡು ಹೋಗುತ್ತಿರುವುದು ದುರ್ದೈವದ ಸಂಗತಿ. ಈಗಿನ ಚುನಾವಣೆಗೂ ಅಂದಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿರುವುದು ಕಂಡುಬರುತ್ತಿದ್ದು, ಕೆಲವೇ ದಿನಗಳಲ್ಲಿ ಬರುತ್ತಿರುವ ಚುನಾವಣೆಯು ಮಹಾ ಅಪಾಯಕಾರಿಯಾಗಿದ್ದು, ಈ ಕುರಿತು ಯುವಕರು ಜಾಗ್ರತರಾಗುವುದು ಅವಶ್ಯವಾಗಿದೆ ಎಂದರು.
ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ: ಇಂದಿನ ಶಿಕ್ಷಣ ವ್ಯವಸ್ಥೆ ಸರಿಯಾಗಿಲ್ಲ. ಈಗಿರುವ ಶಿಕ್ಷಣ ವ್ಯವಸ್ಥೆ ಒಬ್ಬ ವಿದ್ಯಾರ್ಥಿಗೆ ಬೇಕಾದ ಗುಣಮಟ್ಟದ ಶಿಕ್ಷಣ, ಸುಸಂಸ್ಕೃತ ನಾಗರಿಕನಾಗಿ ಬಾಳಲು ಬೇಕಾದ ಸೂಕ್ತ ಶಿಕ್ಷಣವನ್ನು ನೀಡದೇ ಕೇವಲ ಒಂದು ಯಂತ್ರ (ರೋಬೋಟ್)ದಂತೆ ಮಾನವನ ನಿರ್ಮಿಸುವ ಕಾರ್ಯವನ್ನು ಇಂದಿನ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿವೆ. ಯುವಕರು ಕೇವಲ ಸರ್ಕಾರಿ ನೌಕರಿ, ಕೆಲಸಗಳನ್ನು ಪಡೆಯಲು ಶಿಕ್ಷಣ ಪಡೆದರೆ ಸಾಲದು. ದೇಶ ಕಟ್ಟಲು, ಸುಸಂಸ್ಕೃತ ನಾಗರಿಕರಾಗಿ ಬಾಳಲು, ಯುವಜನರಲ್ಲಿ ದೇಶದ ಏಕತೆ ಬಿತ್ತಲು ಬೇಕಾಗುವಂತಹ ಶಿಕ್ಷಣ ಪಡೆದುಕೊಳ್ಳುವು ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಜಾತಿ ವ್ಯವಸ್ಥೆ ನಿಲ್ಲಲಿ: ಇಂದು ಎಲ್ಲೆಡೆ ಜಾತಿ ವ್ಯವಸ್ಥೆ ತಾಂಡವವಾಡುತ್ತಿದೆ. ದೇಶದಲ್ಲಿ ಇಂದು 7 ಸಾವಿರಕ್ಕೂ ಅಧಿಕ ಜಾತಿಗಳಿವೆ. ಅಲ್ಲದೇ ಇವುಗಳಲ್ಲಿ ಒಳಜಾತಿಗಳು ಪ್ರಮುಖವಾಗಿವೆ. ಜಾತಿಗೊಂದು ಸಮ್ಮೇಳನವನ್ನು ಹಮ್ಮಿಕೊಂಡು ದೇಶವನ್ನು ಜಾತಿಯಿಂದ ಬೇರ್ಪಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ಕುರಿತು ಯುವ ಸಮುದಾಯ ಒಗ್ಗೂಡಿ ಈ ಜಾತಿ ವ್ಯವಸ್ಥೆಯನ್ನು ದೇಶದಿಂದಲೇ ತೊಡೆದುಹಾಕಲು ಶ್ರಮಿಸಬೇಕಾಗಿದೆ. ಸುಭದ್ರ ದೇಶ ಕಟ್ಟಬೇಕಾದಲ್ಲಿ ದೇಶದಲ್ಲಿನ ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ ಉತ್ತಮ ಸಂಘಟನೆ ಕಟ್ಟಲು ಶ್ರಮಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, ಭಾರತವು ಬಹುಜಾತಿ, ಸಂಸ್ಕೃತಿ ಹೊಂದಿದ ದೇಶ. ಸಾವಿರಾರು ವರ್ಷಗಳ ಜಾತಿ, ವರ್ಣ, ವರ್ಗದ ವ್ಯವಸ್ಥೆಯಿಂದ, ವೈಚಾರಿಕತೆಯ ಕೊರತೆಯಿಂದ ದೇಶವು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಸ್ವಯಂಘೋಷಿತ ದೇವಮಾನವರು, ಜ್ಯೋತಿಷಿಗಳು ಭಯೋತ್ಪಾದಕರಿಗಿಂತಲೂ ಅಪಾಯಕಾರಿ. ಇವರು ಜನರ ಮನಸ್ಸನ್ನು ಕೆಡಿಸುತ್ತಾರೆ. ಇಂತವರ ವಿರುದ್ಧ ಜನತೆ ಧ್ವನಿಎತ್ತುವ ಕಾರ್ಯ ಕೈಗೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ ಎನ್.ಎಲ್. ಭರತ್ರಾಜ್, ಡಿವೈಎಫ್ಐ ಅಖಿಲ ಭಾರತ ಉಪಾಧ್ಯಕ್ಷೆ ಪ್ರೀತಿ ಶೇಖರ, ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರಮೂರ್ತಿ, ಎಸ್.ವೈ. ಗುರುಶಾಂತ ಮುಂತಾದವರು ಮಾತನಾಡಿದರು. ಪೀರು ರಾಠೋಡ, ಕೆ.ಮಹಾಂತೇಶ, ಬಸವರಾಜ ಮಂತೂರ, ಲಿಂಗರಾಜ, ಬಿ.ವಿ. ಸಂಪಂಗಿ, ಪಿ.ನಾಗರಾಜ, ದಯಾನಂದ ಶೆಟ್ಟಿ, ಬಾಲು ರಾಠೋಡ ಮುಂತಾದವರು ಉಪಸ್ಥಿತರಿದ್ದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಶಾನಭೋಗ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಎಂ.ಎಸ್. ಹಡಪದ ನಿರೂಪಿಸಿದರು. ಮಾಗುಂಡಪ್ಪ ಅಂಗಡಿ ವಂದಿಸಿದರು.
ಜ್ಯೋತಿಷಿಗಳಿಗೆ ಗಂಜಿಕೇಂದ್ರ ತೆರೆಯಿರಿ
ಇಂದಿನ ಬದಲಾದ ವಿದ್ಯಮಾನದಲ್ಲಿ ಸಾರ್ವಜನಿಕರು ಬೆಳಗ್ಗೆ ಎದ್ದ ತಕ್ಷಣ ಜ್ಯೋತಿಷಿಗಳ ಮಾತನ್ನು ಕೇಳಿಯೇ ಕಾರ್ಯಾರಂಭ ಮಾಡುವ ರೀತಿಗೆ ಬಂದು ತಲುಪಿದ್ದು ಅತ್ಯಂತ ನೋವಿನ ಸಂಗತಿಯಾಗಿದೆ. ಜ್ಯೋತಿಷಿಗಳ ಮಾತನ್ನು ಎಲ್ಲಿಯವರೆಗೂ ಜನತೆ ನಂಬುವರೋ ಅಲ್ಲಿಯವರೆಗೆ ಈ ದೇಶದ ಅಭಿವೃದ್ಧಿ ಅಸಾಧ್ಯ. ಜ್ಯೋತಿಷಿಗಳಿಂದ ಜನತೆಯಲ್ಲಿ ತಪ್ಪು ಮನೋಭಾವನೆ ರೂಪಿತವಾಗುತ್ತಿದೆ. ಮತ್ತು ಅದು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿ ಜ್ಯೋತಿಷವನ್ನು ರದ್ದುಗೊಳಿಸಿ ಜ್ಯೋತಿಷಿಗಳಿಗೆ ಪ್ರತ್ಯೇಕ ಗಂಜಿಕೇಂದ್ರ ನಿರ್ಮಿಸಿಕೊಡಲಿ ಎಂದು ಕುಂ. ವೀರಭದ್ರಪ್ಪ ಕಾರ್ಯಕ್ರಮದಲ್ಲಿ ಹೇಳಿದ್ದು ವಿಶೇಷವಾಗಿತ್ತು.