ಶಿಕ್ಷಕರು ಗಣಿತ-ವಿಜ್ಞಾನ ಪರಿಣಾಮಕಾರಿಯಾಗಿ ಕಲಿಸಲಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 6
ಗಣಿತ ಮತ್ತು ವಿಜ್ಞಾನವನ್ನು ವಿದ್ಯಾರ್ಥಿಗಳಿಗೆ ಸರಳ ಮತ್ತು ಪರಿಣಾಮಕಾರಿಯಾಗಿ ಕಲಿಸುವ ನಿಟ್ಟಿನಲ್ಲಿ ಶಿಕ್ಷಕರು ನಿಷ್ಠೆ ಮತ್ತು ಕರ್ತವ್ಯಪ್ರಜ್ಞೆಯೊಂದಿಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಕರೆ ನೀಡಿದರು.
ಅವರು ಗುರುವಾರ ನಗರದ ತೋಂಟದಾರ್ಯ ಎಂಜಿನೀಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಗದಗ ಜಿಪಂ, ಗದಗ ಸಾರ್ವಜನಿಕ ಇಲಾಖೆ ಹಾಗೂ ಜ. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ಗದಗ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಗಣಿತ ಮತ್ತು ವಿಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಗಣಿತ ಮತ್ತು ವಿಜ್ಞಾನ ವಿಷಯವೆಂದರೆ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನ್ನುವಂತಾಗಿದೆ. ಈ ಮಾತಿಗೆ ಕಾರಣಗಳು ಹಲವು ಇರಬಹುದಾದರೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಇತರ ವಿಷಯಗಳನ್ನು ಕಲಿಸುವಾಗಿನ ಆಸಕ್ತಿ, ಕೌಶಲ್ಯವನ್ನು ಗಣಿತ ಮತ್ತು ವಿಜ್ಞಾನ ವಿಷಯದಲ್ಲೂ ತೋರಿಸಬೇಕು. ಗಣಿತದ ಸೂತ್ರಗಳನ್ನು ಸರಳೀಕರಣಗೊಳಿಸಿ, ವಿಜ್ಞಾನವನ್ನು ಪಾಠದೊಂದಿಗೆ ಪ್ರಯೋಗ ಶಾಲೆಯಲ್ಲಿಯೂ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಮನವರಿಕೆಯಾಗುವ ರೀತಿಯಲ್ಲಿ ಕಲಿಸಬೇಕಿದೆ. ಶಿಕ್ಷಕರು ಗಣಿತ ಮತ್ತು ವಿಜ್ಞಾನವನ್ನು ಪರಿಣಾಮಕಾರಿಯಾಗಿ ಕಲಿಸಲು ಪೂರಕವಾಗಿರುವ ಇಂತಹ ಕಾರ್ಯಾಗಾರಗಳ ಅವಶ್ಯಕತೆಯಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ಆಧುನಿಕ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಗೊಂಡಿದೆ. ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರಗಳಾಗಿವೆ. ಅವುಗಳನ್ನು ಅರಿತುಕೊಳ್ಳುವ ಮತ್ತು ಜ್ಞಾನವನ್ನು ಇನ್ನಷ್ಟು ಅಭಿವೃದ್ಧಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಾಗಾರಗಳು ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಬಿ.ವಿ. ರಾಜೇಂದ್ರಪ್ರಸಾದ ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಣ ಗುಣಮಟ್ಟ, ಕಲಿಕಾ ಮತ್ತು ಕಲಿಸುವ ಗುಣಮಟ್ಟವನ್ನು ಸುಧಾರಿಸಲು ಹಲವಾರು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಮಾಲಿಕೆಯಲ್ಲಿ ಇಂತಹ ಕಾರ್ಯಾಗಾರ ಏರ್ಪಡಿಸಲಾಗಿದೆ. ಗದಗ ಜಿಲ್ಲೆಯ ಪ್ರೌಢ ಶಾಲೆಯ ಗಣಿತ ಮತ್ತು ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರಿಗೆ ಇದು ಹೆಚ್ಚು ಸದುಪಯೋಗವಾಗಲಿದೆ. ಬರಲಿರುವ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ಇತರ ವಿಷಯಗಳಂತೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲೂ ಅತಿ ಹೆಚ್ಚಿನ ಅಂಕಗಳನ್ನು ಪಡೆಯುವಂತಾಗಲಿ ಎಂದರು.
ಸಿಟಿಇ ಸಹ ನಿರ್ದೇಶಕ ಮಂಟಲಿಂಗಾಚಾರ್ ಹಾಗೂ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಹೂಗಾರ, ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ, ಮುಂಡರಗಿ ಬಿಇಒ ಎಂ.ಎ. ರಡ್ಡೇರ, ರೋಣ ಬಿಇಒ ಡಿ.ಐ. ಅಸುಂಡಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಮಂಗಲಾ ತಾಪಸ್ಕರ್, ಗದಗ ಡಯಟ್ ಪ್ರಾಚಾರ್ಯ ಬಿ.ಎಸ್. ರಘುವೀರ, ಪ್ರಾ. ಪ್ರಕಾಶ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸುರೇಶ ಕುಲಕರ್ಣಿ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮಂಟಲಿಂಗಾಚಾರ್, ಬಿ.ವಿ. ರಾಜೇಂದ್ರಪ್ರಸಾದ ಹಾಗೂ ಪದ್ಮಾ ಹುಂಬಿ ಅವರನ್ನು ಸನ್ಮಾನಿಸಲಾಯಿತು. ವಿಷಯ ಪರಿವೀಕ್ಷಕ ಎ.ಎ. ಖಾಜಿ ಸ್ವಾಗತಿಸಿದರು. ಕೆ.ಪಿ. ಸಾಲಿಮಠ ನಿರೂಪಿಸಿದರು. ಡಿ.ಡಿ. ದಾಸರ ವಂದಿಸಿದರು.