ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಳಾಂತರಿಸಿ: ಮನವಿ

Rashmi Kasaragodu
Updated On : 8 Mar 2014, 12:23 pm

ಗಜೇಂದ್ರಗಡ: ಸ್ಥಳೀಯ ಪುರಸಭೆಯಿಂದ ನಿರ್ಮಿಸಿರುವ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕ ಅವೈಜ್ಞಾನಿಕದಿಂದ ಕೂಡಿದ್ದು, ಕೂಡಲೇ ಬೇರೆಡೆಗೆ ಸ್ಥಳಾಂತರಿಸಿ ಪರಿಸರ ಮಾಲಿನ್ಯ ತಪ್ಪಿಸಿ ಎಂದು ಶುದ್ಧ ಪರಿಸರ ಮಾಲಿನ್ಯ ಹೋರಾಟ ಸಮಿತಿ ಪದಾಧಿಕಾರಿಗಳು ಈಚೆಗೆ ಶಾಸಕ ಜಿ.ಎಸ್. ಪಾಟೀಲಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಹೊರ ವಲಯದ ನಾಲ್ಕು ಎಕರೆ 27 ಗುಂಟೆ ವಿಸ್ತೀರ್ಣ ಜಮೀನಿನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕ ನಿರ್ಮಿಸಿರುವುದರಿಂದ ಸುತ್ತಲಿನ ರೈತಾಪಿ ಕುಟುಂಬಗಳಿಗೆ ಹಾಗೂ ಪಕ್ಕದಲ್ಲಿರುವ ತಾಂತ್ರಿಕ ಕಾಲೇಜು, ವಸತಿ ನಿಲಯ, ಸಾಯಿ ದೇಗುಲ ಭಕ್ತರಿಗೆ ತೀವ್ರ ತೊಂದರೆಯಾಗಿದೆ. ಜತೆಗೆ ಘನತ್ಯಾಜ್ಯ ಘಟಕದಿಂದ ಹೊರ ಬರುವ ದುರ್ವಾಸನೆ ಮತ್ತು ರೋಗ ರುಜಿನಗಳು ತಗಲುವ ಭೀತಿ ಇದೆ.
ಭೌತಿಕವಾಗಿ 4ರಿಂದ 5 ಕಿ.ಮೀ ದೂರದಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಬೇಕು ಹಾಗೂ ಬಂಜರು ಭೂಮಿಯಾಗಿರಬೇಕು. ಆದರೆ, ನಿಯಮಾವಳಿ ಗಾಳಿಗೆ ತೂರಿ ಪುರಸಭೆಯವರು ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕ ನಿರ್ಮಿಸಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಕೂಡಲೇ ಘಟಕವನ್ನು ಬಂಜರು ಅಥವಾ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಜತೆಗೆ ಘಟಕದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ರೋಗ ನಿರೋಧಕ ಉಡುಗೆ ನೀಡಿ ಸುಂದರ ಮತ್ತು ಸ್ವಚ್ಛ ಪರಿಸರ ಕಾಪಾಡುವಲ್ಲಿ ಪುರಸಭೆಯವರು ಮುಂದಾಗದಿದ್ದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಗುರುನಾಥಸಾ ರಾಯಬಾಗಿ, ಚಂಬಣ್ಣ ಚವಡಿ, ಅಂಬಾಸಾ ರಾಯಬಾಗಿ, ರಾಜು ಕಮ್ಮಾರ, ಸಂಜು ರಾಯಬಾಗಿ, ಭಗವಂತಗೌಡ ಪಾಟೀಲ, ಮೋಹನ ರಾಯಬಾಗಿ, ರಾಘು ರಾಯಬಾಗಿ, ಶ್ರೀಕಾಂತ ತಾಳಿಕೋಟಿ ಮುಂತಾದವರು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement