ಯೋಜನೆ ಸಮರ್ಪಕ ಬಳಕೆಯಿಂದ ಶ್ರಮ ಸಾರ್ಥಕ: ಪಿಡಶೆಟ್ಟಿ
ಗಜೇಂದ್ರಗಡ: ಸರ್ಕಾರ ಗ್ರಾಮೀಣ ಪ್ರದೇಶದ ಜನತೆಯ ಶ್ರೆಯೋಭಿವೃದ್ಧಿಗಾಗಿ ನೀಡಿರುವ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಪಿಡಶೆಟ್ಟಿ ಹೇಳಿದರು.
ಸಮೀಪದ ಕೊಡಗಾನೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ, ಜಿಪಂ ಗದಗ, ತಾಲೂಕು ಪಂಚಾಯಿತಿ ರೋಣ ಹಾಗೂ ಗ್ರಾಪಂ ರಾಮಾಪುರ ಆಯೋಜಿಸಿದ್ದ ನಿರ್ಮಲ ಭಾರತ ಅಭಿಯಾನ ಸ್ವಚ್ಛತಾ ಸಪ್ತಾಹ- 2014, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ರೋಣ ತಾಪಂ ವ್ಯಾಪ್ತಿಯಲ್ಲಿ 37 ಸಾವಿರ ಶೌಚಾಲಯ ನಿರ್ಮಾಣ ಗುರಿ ಹೊಂದಿದ್ದು, ಅದಕ್ಕೆ ರಾಮಾಪುರ ಗ್ರಾಮ ಪಂಚಾಯಿತಿಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪರಿಣಾಮ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮೊದಲನೇ ಸ್ಥಾನದಲ್ಲಿದೆ.
ಇಲ್ಲಿನ ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ ಸ್ವತಃ ಕಟ್ಟಡ ಕಾರ್ಮಿಕನಾಗಿದ್ದು, ತಮ್ಮ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ತಮ್ಮ ಸಹ ಕಾರ್ಮಿಕರಿಂದ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿ ಸಮಾಜ ಸೇವೆ ಮಾಡಿರುವುದನ್ನು ಪರಿಗಣಿಸಿ ಇಲಾಖೆ ವತಿಯಿಂದ ಅವರಿಗೆ ಸನ್ಮಾನಿಸಿದ್ದು ಸ್ತುತ್ಯಾರ್ಹ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಸ್.ಬಿ. ಕಡಬಲಕಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶ ಜನತೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗ್ರಾಮದಲ್ಲಿನ ಬಯಲು ಶೌಚಾಲಯ, ಗಲೀಜು ವಾಸನೆಯಂತಹ ಅನೈರ್ಮಲ್ಯ ತೊಡೆದು ಹಾಕಿ ಎಂದರು. ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಮಂಜುನಾಥ ಮೇಟಿ, ಸದಸ್ಯ ಡಿ.ವೈ. ದೊಡ್ಡಮನಿ, ಎಂ.ವೈ. ಅವಧೂತ, ಆರ್.ಎಲ್. ಜಾಧವ, ಬಸಮ್ಮ ಕುರಿ, ಕೋಟ್ರೇಶ ಹೂಗಾರ, ಪರಸಪ್ಪ ಮಾಳೋತ್ತರ, ಮಲ್ಲಮ್ಮ ಪೂಜಾರ, ಲಕ್ಷ್ಮವ್ವ ಗೌಡ್ರ, ಎಲ್.ಸಿ. ಗೂಳಿ, ದುರಗವ್ವ ಚವಟಗಿ, ಹುಲಿಗೆವ್ವ ಸಣ್ಣಕ್ಕಿ ಇತರರು ಉಪಸ್ಥಿತರಿದ್ದರು.
ಸಣ್ಣ ಕಾಲುವೆ ನವೀಕರಣ ಶೀಘ್ರ: ಬಿಆರ್ವೈ
ನರಗುಂದ: ಜಿಲ್ಲೆಯ ರೋಣ ಮತ್ತು ನರಗುಂದ ತಾಲೂಕಿನಲ್ಲಿರುವ ರೈತರ ಹೊಲಗಳಿಗೆ ನೀರು ಹರಿಸುವ ಸಣ್ಣ ಕಾಲುವೆಗಳನ್ನು ರು. 250 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು. ಈಚೆಗೆ ತಾಲೂಕಿನ ಗುರ್ಲಗಟ್ಟಿ ಗ್ರಾಮದ ಸಮುದಾಯ ಭವನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರದಾರರು ಮೈಮುರಿದು ಕೆಲಸ ಮಾಡಬೇಕು. ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದರು. ಗ್ರಾಪಂ ಅಧ್ಯಕ್ಷ ಹನುಮವ್ವ ಬೆಳ್ಳೇರಿ, ಗುರಪಾದಪ್ಪ ಕುರಹಟ್ಟಿ, ಎಸ್.ಡಿ. ಕೊಳ್ಳಿ, ಬಿ.ಎನ್. ಕೊಳ್ಳಿ, ಶಂಭಯ್ಯ ಹಿರೇಮಠ, ಶಿವನಗೌಡ ಹೆಬ್ಬಳ್ಳಿ, ದ್ಯಾಮಣ್ಣ ಸವದತ್ತಿ, ಸೋಮರಡ್ಡಿ, ಪುಂಡಲಿಕಪ್ಪ ಹುಲಜೋಗಿ, ಚಂಬಣ್ಣ ಮೆಣಸನಕಾಯಿ, ಬಾಬಾ ಪೇಟೆ, ಎಸ್.ಎಸ್. ಶಿವನಗೌಡ್ರ ಇತರರಿದ್ದರು.