ಅಕಾಲಿಕ ಮಳೆ: ಹತ್ತಿ ಬೆಳೆಗೆ ಕುತ್ತು
ರೋಣ: ವಾರದಿಂದ ಕಾಣಿಸಿಕೊಳ್ಳುತ್ತಿರುವ ಅಕಾಲಿಕ ಮಳೆಯಿಂದ ತಾಲೂಕಿನ ರೈತ ಸಮುದಾಯ ಕಂಗಾಲಾಗಿದೆ. ಶೇಂಗಾ ಹಾಗೂ ಗೋದಿ ಹೊಟ್ಟು, ಬಿಳಿ ಜೋಳ, ಕಟಾವು ಹಂತದಲ್ಲಿದ್ದ ಜಯಧರ ಹತ್ತಿ ಬೆಳೆ ಅಕಾಲಿಕ ಮಳೆಯಿಂದ ಹಾನಿಯಾಗಿದ್ದು, ರೈತ ಸಮುದಾಯ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ಹಿಂಗಾರು ಹಂಗಾಮಿನ ವಾಣಿಜ್ಯ ಬೆಳೆಯಾದ ಜಯಧರ ಹತ್ತಿಯನ್ನು ತಾಲೂಕಿನ ಬಹುತೇಕ ರೈತರು ಬೆಳೆದಿದ್ದಾರೆ. ತಾಲೂಕಿನಲ್ಲಿ ಸುಮಾರು 4000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದಾರೆ. ಆಳು(ಕಾರ್ಮಿಕರ)ಗಳ ಕೊರತೆಯಿಂದ ಹತ್ತಿಯನ್ನು ಕಟಾವು ಮಾಡುವಲ್ಲಿ ವಿಳಂಬವಾಗಿತ್ತು. ಏಕಾಏಕಿ ಸುರಿದ ಮಳೆ ಮತ್ತು ರಭಸದ ಗಾಳಿಗೆ ಹತ್ತಿ ಮಣ್ಣು ಪಾಲಾಗಿದೆ.
ತಾಲೂಕಿನ ಕೊತಬಾಳ, ಮುಗಳಿ, ತಳ್ಳಿಹಾಳ, ಇಟಗಿ, ಯರೇಕುರಬನಾಳ, ಬಳಗೋಡ ಸೇರಿದಂತೆ ಅನೇಕ ಭಾಗಗಳಲ್ಲಿ ಮಂಗಳವಾರ ಮತ್ತು ಬುಧವಾರ ಸಾಯಂಕಾಲ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದ್ದರಿಂದ ಹತ್ತಿಯು ನೆಲಕಚ್ಚಿದ್ದು, ಅಲ್ಪಸಲ್ಪ ಗಿಡದಲ್ಲಿ ಉಳಿದಿದೆ. ಇದರಿಂದಾಗಿ ಇಲ್ಲಿನ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದು ಚಿಂತಾಕ್ರಾಂತರಾಗಿದ್ದಾರೆ.
ಬೆಂಬಿಡದ ಮಳೆ: ವಾರದಿಂದ ಪ್ರತಿ ದಿನ ಸಾಯಂಕಾಲ ಬೆಂಬಿಡದಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು, ಗಾಳಿ ಸಮೇತ ಮಳೆಯಾಗುತ್ತಿದೆ. ಇದರಿಂದ ತಾಲೂಕಿನ ಅರಹುಣಸಿ, ಹಿರೇಮಣ್ಣೂರು, ಸಂದಿಗವಾಡ, ಮಲ್ಲಾಪುರ, ಹೊನ್ನಾಪುರ, ಸವಡಿ, ಚಿಕ್ಕಣ್ಣೂರು, ಮೇಲ್ಮಠ, ಅಸೂಟಿ, ಹೊಳೆಆಲೂರು, ಹಿರೇಹಾಳ, ಕೊತಬಾಳ, ಮುಗಳಿ, ತಳ್ಳಿಹಾಳ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ರೈತರು ಅಕಾಲಿಕ ಮಳೆಯಿಂದ ಕಟಾವು ಹಂತಕ್ಕೆ ಬಂದಿದ್ದ ಜಯಧರ ಹತ್ತಿ ಬೆಳೆ ಕಳೆದುಕೊಂಡಿದ್ದಾರೆ.
ಕೈ ಸುಟ್ಟುಕೊಂಡ ಕಲಾವಿದ: ಜನಪದ ಕಲೆ, ಸಂಸ್ಕೃತಿಯನ್ನು ನಾಡು, ಜಗತ್ತಿನಾದ್ಯಂತ ಪರಿಚಯಿಸಿದ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾತಂಡದ ಮುಖ್ಯಸ್ಥ, ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಸಂಕ್ರಣ್ಣ ಸಂಕಣ್ಣವರ ಅವರು ಮುಗಳಿ ಗ್ರಾಮದ ವ್ಯಾಪ್ತಿಯಲ್ಲಿ 20 ಎಕರೆ ಪ್ರದೇಶದಲ್ಲಿ ಜಯಧರ ಹತ್ತಿ ಬೆಳೆದಿದ್ದರು. ಆಳಿನ ಕೊರತೆಯಿಂದ ಕಟಾವು ಮಾಡಿದ್ದಲ್ಲ. ಅಕಾಲಿಕವಾಗಿ ಎರಗಿ ಬಂದ ಆಲಿಕಲ್ಲ ಮಳೆಯೂ ಇವರ ಹೊಲದಲ್ಲಿನ ಹತ್ತಿಯನ್ನೆಲ್ಲ ಸಂಪೂರ್ಣ ನೆಲದ ಪಾಲಾಗುವಂತೆ ಮಾಡಿತು. ಸುಮಾರು 90 ಕ್ವಿಂಟಲ್ ಬೆಳೆ ಬರಬೇಕಿದ್ದು, ಮಳೆಯಿಂದಾಗಿ ಈಗ ಅಬ್ಬಬ್ಬಾ ಅಂದ್ರೂ 20 ಕ್ವಿಂಟಲ್ ಬರಲಿದೆ. ಲಕ್ಷಾಂತರ ರು. ಖರ್ಚು ಮಾಡಿ ಬೆಳೆದ ಬೆಳೆಯೂ ಮಣ್ಣು ಪಾಲಾಯಿತಲ್ಲ ಎಂದು ಕಲಾವಿದ, ಪ್ರಗತಿಪರ ರೈತ ಸಂಕ್ರಣ್ಣ ಸಂಕಣ್ಣವರ ಅಳಲಾದರೆ, ಇನ್ನೂ ಇವರಂತೆ ತಾಲೂಕಿನಲ್ಲಿ ನೂರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಳಿಗೆ ಭಾರಿ ಡಿಮ್ಯಾಂಡ್: ಈ ಬಾರಿ ಆಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ದಿನವೊಂದಕ್ಕೆ ರು. 150ರಿಂದ 200 ವರೆಗೆ ಕೂಲಿ ಕೊಡುತ್ತೇವೆ ಎಂದರೂ ಆಳುಗಳು(ಕೂಲಿ ಕಾರ್ಮಿಕರು) ಸಿಗುತ್ತಿಲ್ಲ. ದೂರದ ಊರುಗಳಿಂದ ಸಾವಿರಾರು ರು.ಗಳ ಬಾಡಿಗೆ ವಾಹನ ಮೂಲಕ ಆಳುಗಳನ್ನು ತರಬೇಕು. ಹೀಗಿದ್ದರೂ ಆಳುಗಳ ಕೊರತೆ ಇದೆ. ಪದೇ ಪದೆ ಮಳೆಯಾಗುತ್ತಿರುವುದರಿಂದ ಕಂಗಾಲಾದ ರೈತರು, ಇದ್ದಂತ ಬೆಳೆಯನ್ನಾದರೂ ರಕ್ಷಿಸಿಕೊಳ್ಳಬೇಕು ಎಂಬ ತರಾತುರಿಯಲ್ಲಿ ಆಳುಗಳು ಕೇಳಿದಷ್ಟು ಕೂಲಿ ಕೊಡುವಲ್ಲಿ ಸಿದ್ಧನಾಗಿದ್ದಾರೆ. ಕೆಲವಡೆ ರೈತರು ಹತ್ತಿ ಬಿಡಿಸಲು ಕೆಜಿಗೆ ರು. 10 ರಿಂದ 12 ನಿಗದಿಪಡಿಸಿದ್ದಾರೆ. ಇನ್ನು ಕೆಲವರು ಎಕರೆಗೆ ಇಂತಿಷ್ಟು ಅಂತ ಗುತ್ತಿಗೆ ಆಧಾರದಲ್ಲಿ ಕೊಡುತ್ತಾರೆ. ಇದಕ್ಕೂ ಮುಂದುವರಿದು ಕೆಲ ರೈತರು ಕಟಾವು ಮಾಡಿದ ಹತ್ತಿಯಲ್ಲಿ ಅರ್ಧ ನಿಮಗೆ(ಆಳುಗಳಿಗೆ) ಇನ್ನರ್ಧ ನಮಗೆ ಎಂದು ಒಪ್ಪಂದ ಮಾಡಿಕೊಂಡು ಕಟಾವು ಮಾಡಿಸುತ್ತಿದ್ದಾರೆ. ಆದರೂ ಆಳುಗಳು ಸಿಗುತ್ತಿಲ್ಲ ಎಂದು ಕೊತಬಾಳ ರೈತ ಬಸವರಾಜ ಶಿ. ಪಾಗದ, ಚನ್ನಯ್ಯ ಹಿರೇಮಠ, ಯಮನೂರಸಾಬ್ ಅರಮನಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಹತ್ತಿಗೆ ದರ ಕಡಿಮೆಯಾಗುವ ಭಯ: ಮಳೆಗೆ ಸಿಲುಕಿರುವ ಹತ್ತಿಗೆ ದರ ಕಡಿಮೆಯಾಗುವ ಸಾಧ್ಯತೆ ಹೆಚ್ಚು. ಮಳೆಯಿಂದಾಗಿ ಮಣ್ಣು ಮಿಶ್ರಿತ ಮತ್ತು ಕೆಂಪು ಬಣ್ಣಕ್ಕೆ ತಿರುಗುವುದರಿಂದ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ಈಗಿದ್ದ ರು. 3700 ಬದಲಿಗೆ ರು. 2500ಗಳಿಂದ ರು. 3000ಗೆ ಮಾರಾಟವಾಗಲಿದೆ. ಅಲ್ಲದೆ ಯಾವುದೇ ರೀತಿಯ ಹಾನಿಯಾಗದಿದ್ದಲ್ಲಿ ಎಕರೆಗೆ 4 ರಿಂದ 5 ಕ್ವಿಂಟಲ್ ಬೆಳೆ ಬರುತ್ತಿತ್ತು. ಈಗ ಕೇವಲ 1 ರಿಂದ 2 ಕ್ಲಿಂಟಲ್ ಕೈಗೆಟುಕುತ್ತದೆ. ಉಳಿದಿದ್ದು ಮಣ್ಣು ಪಾಲು.
ಪರಿಹಾರಕ್ಕೆ ಆಗ್ರಹ: ಅಕಾಲಿಕ ಮಳೆಯಿಂದಾಗಿ ಶೇಂಗಾ, ಗೋದಿ ಹೊಟ್ಟು, ಬಿಳಿಜೋಳ ಬೆಳೆ, ತೊಗರಿ ಬೆಳೆ, ಕಡಲೆ ಬೆಳೆಗಳೊಂದಿಗೆ ಲಕ್ಷಾಂತರ ರು. ಹತ್ತಿ ಬೆಳೆ ಹಾನಿಯಾಗಿದೆ. ಇದರಿಂದ ಸಾಲ ಮಾಡಿ ಬೀಜ, ಗೊಬ್ಬರ ಹಾಕಿ, ಬಾಡಿಗೆ ಗಳೇಯಿಂದ ಬಿತ್ತಿದ ಬೆಳೆಯು ಕೈಗೆಟಕದಂತಾಗಿದೆ. ರೈತರ ಬದುಕು ಅಕ್ಷರಶಃ ಬಿದ್ದಿದೆ.
ಕೂಡಲೇ ಸಂಬಂಧಪಟ್ಟ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತು, ಹಾನಿ ಕುರಿತು ಸಮೀಕ್ಷೆ ಮಾಡಿ ಸರ್ಕಾರಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವರದಿ ಸಲ್ಲಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಪರಿಹಾರ ಒದಗಿಸುವಲ್ಲಿ ಮುಂದಾಗಬೇಕು ಎಂದು ತಾಲೂಕಿನ ಕೊತಬಾಳ ಗ್ರಾಮದ ರೈತರಾದ ಮುತ್ತಪ್ಪ ಹಡಗಲಿ, ಈರಣ್ಣ ಯಾಳಗಿ, ಬಸಪ್ಪ ಪಲ್ಲೇದ, ಬಾಪುಗೌಡ ಪಾಟೀಲ, ಎಂ.ವಿ. ಯಾಳಗಿ, ಮುಗಳಿ ಗ್ರಾಮದ ಶರಣಪ್ಪ ಅವಾರಿ, ಶರಣಪ್ಪ ಮಲ್ಲಾಪುರ, ಮುತ್ತಪ್ಪ ಈಟಿ, ಮಂಜು ಕೋರಿ, ತಳ್ಳಿಹಾಳ ಗ್ರಾಮದ ಶ್ರೀಶೈಲ ಶಿರಗುಂಪಿ, ಹುವಪ್ಪ ಮ್ಯಾಗೇರಿ ಆಗ್ರಹಿಸಿದರು.
-ಪಿ.ಎಸ್. ಪಾಟೀಲ