ಕುತೂಹಲದ ಆಲಿಕಲ್ಲು ಮಳೆ
ಮುಂಡರಗಿ/ಗದಗ: ಮುಂಡರಗಿ ತಾಲೂಕಿನ ಮುಷ್ಠಿಕೊಪ್ಪ ಗ್ರಾಮದ ಹತ್ತಿರ ಶುಕ್ರವಾರ ರಾತ್ರಿ ಸುರಿದ ಮಳೆಗೆ ದೊಡ್ಡ-ದೊಡ್ಡ ಆಲಿಕಲ್ಲು ಬಂಡೆಗಳು 4-5 ಸ್ಥಳಗಳಲ್ಲಿ ಬಿದ್ದು ಜನರಿಗೆ ಕೂತುಹಲ ಮತ್ತು ಆತಂಕ ಮೂಡಿಸಿದೆ.
ಶುಕ್ರವಾರ ತಡರಾತ್ರಿ ಪ್ರಾರಂಭವಾದ ಮಳೆ ಕೇವಲ 15 ನಿಮಿಷ ಸುರಿದಿದೆ. ಈ ಮಳೆಯಲ್ಲಿ ಮುಷ್ಠಿಕೊಪ್ಪ ಗ್ರಾಮದ ತಿಮ್ಮಪ್ಪನ ತೋಟದ ಸುತ್ತಮುತ್ತ ಮತ್ತು ಮುಷ್ಠಿಕೊಪ್ಪ ಹಳ್ಳದ ಹತ್ತಿರ 4-5 ಕಡೆ ಆಲಿಕಲ್ಲು ಬಂಡೆಗಳು ಬಿದ್ದಿರುವುದಾಗಿ ತಿಳಿದುಬಂದಿದೆ. ತೋಟಪ್ಪನ ತೋಟದಲ್ಲಿ ಬಿದ್ದಿರುವ ಆಲಿಕಲ್ಲು ಬಂಡೆ ತೋಟದ ಒಡ್ಡನ್ನು ಕೊರೆದು ಹಳ್ಳವನ್ನು ಸೇರಿದೆ. ಈ ಹಳ್ಳದಲ್ಲಿ ಆಲಿಕಲ್ಲು ಬಂಡೆ ಪುಡಿಪುಡಿಯಾಗಿ ಒಡೆದು ಸಣ್ಣ ಕಲ್ಲಿನ ಆಕಾರದ ತುಂಡುಗಳಾಗಿ ಬಿದ್ದಿವೆ.
ಆಲಿಕಲ್ಲುಗಳು ಐಸ್ ಬಂಡೆ ತರಹ ಕಾಣದೆ ಮುತ್ತುಗಳು ಜೋಡಿಸಿದ ಹಿಮದ ಬಂಡೆಯಂತೆ ಕಾಣುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಬೆಳಗಾಗುತ್ತಿದ್ದಂತೆ ಮುಷ್ಠಿಕೊಪ್ಪ ಮತ್ತು ಕಲಕೇರಿಯ ಜನರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು. ಅನೇಕರು ಕೈಯಲ್ಲಿ ತಂಬಿಗೆ, ಪ್ಲಾಸ್ಟಿಕ್ ಚೀಲಗಳನ್ನು ಹಿಡಿದುಕೊಂಡು ಬಂದು ಸಿಕ್ಕ ಆಲಿಕಲ್ಲುಗಳನ್ನು ಮತ್ತು ಆಲಿಕಲ್ಲುವಿನ ಚಿಕ್ಕಚಿಕ್ಕ ಬಂಡೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಬರುಬರುತ್ತಾ ಆಲಿಕಲ್ಲುವಿನ ಬಂಡೆಗಳಲ್ಲಿಯ ಆಲಿಕಲ್ಲುಗಳು ಕರಗಿ ಬಿಡಿಬಿಡಿಯಾಗಿ ಕೆಳಗೆ ಬಿಳಿ ಬಣ್ಣದ ಮುತ್ತಿನ ರಾಶಿಯನ್ನು ಹಾಸಿದಂತೆ ಕಾಣತೊಡಗಿತು. ಆ ಸ್ಥಳದಲ್ಲಿ ಅನೇಕರು ತಿರುಗಾಡಿದ್ದರಿಂದ ಕೆಸರುಮಯವಾಗಿದ್ದ ಅಲ್ಲಿಯ ಸ್ಥಳದಲ್ಲಿ ಆಲಿಕಲ್ಲಿನ ಚೂರುಗಳು ಬೆಳಕಿಗೆ ಕಂಗೊಳಿಸುತ್ತಿದ್ದವು. ಮಧ್ಯಾಹ್ನ 1 ಗಂಟೆಯ ವರೆಗೂ ಇಲ್ಲಿ ಆಲಿಕಲ್ಲಿನ ಹಾಸಿಗೆ ಇತ್ತು. ಜನರು ಆಲಿಕಲ್ಲುಗಳನ್ನು ತಮ್ಮ ಮನೆಗಳಿಗೆ ಸಾಗಿಸುತ್ತಿರುವುದು ನಿರಂತರ ನಡೆದೇ ಇತ್ತು. ಆಲಿಕಲ್ಲು ಮಳೆಯಾಗಿರುವುದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ಅನೇಕ ಆಲಿಕಲ್ಲುಗಳು ವ್ಯವಸ್ಥಿತವಾಗಿ ಜೋಡಣೆಹೊಂದಿ ಗಣೀಕರಿಸಿಕೊಂಡು ಭೂಮಿಯನ್ನು ತಲುಪಿದ್ದು ಇದೇ ಮೊದಲು ನೋಡುತ್ತಿರುವುದು ಎಂದು ಮುಷ್ಠಿಕೊಪ್ಪದ ರೈತರು ಹೇಳುತ್ತಾರೆ. ಮಳೆಗಾಲ ಅಲ್ಲದ ಈ ದಿನಗಳಲ್ಲಿ ಆಲಿಕಲ್ಲು ಬಂಡೆಯ ಮಳೆಯಾಗುತ್ತದೆ ಎಂದರೆ ಆಶ್ಚರ್ಯವಾಗುತ್ತದೆ. ಗಾಳಿಯಲ್ಲಿ ನೀರಿನ ಆವಿ ಹೆಪ್ಪುಗಟ್ಟಿದಾಗ, ಅದು ಮಳೆಯಾಗಿ ಭೂಮಿಯನ್ನು ತಲುಪಲು ಸಾಕಷ್ಟು ವೇಳೆ ಇಲ್ಲದ ಕಾರಣ ಆಲಿಕಲ್ಲುಗಳಾಗಿ ಈ ಮಳೆಯ ಹನಿಗಳು ಬೀಳುತ್ತವೆ ಎಂದು ಹೇಳಲಾಗುತ್ತದೆ.