ಭಾರತವನ್ನು ಸೋಲಿಸುತ್ತಿರುವ ಸರ್ಕಾರಗಳು: ನಿತ್ಯಾನಂದಸ್ವಾಮಿ
ಗದಗ: ಹಿಂದೆ ಇಂಡಿಯಾ ಇಂದಿರಾ ಎಂಬ ಘೋಷಣೆಗಳು ಕೇಳಿ ಬಂದವು. ಇಂದು ಕೆಲವು ದಿನಗಳಿಂದ ಭಾರತ ಗೆಲ್ಲಿಸಿ ಎಂಬ ದೊಡ್ಡ ಅಕ್ಷರದ ಬರಹಗಳು ಎಲ್ಲೆಂದರಲ್ಲಿ ಕಾಣುತ್ತಿವೆ. ಈ ಎರಡು ಘೋಷಣೆಗಳು ಭಾರತವನ್ನು ಎಂದೋ ಸೋಲಿಸಿವೆ. ಪ್ರಜಾಪ್ರಭುತ್ವಕ್ಕೆ ವಿರೋಧವಾಗಿ ಪ್ರಧಾನ ಮಂತ್ರಿ ಆಯ್ಕೆಯನ್ನು ಚುನಾವಣೆ ಮೊದಲೇ ನಿರ್ಧರಿಸಿ ಗೆಲ್ಲಿಸಿ ಎಂದು ಹೇಳುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಮುಖಂಡ ನಿತ್ಯಾನಂದಸ್ವಾಮಿ ಹೇಳಿದರು.
ಅವರು ಶುಕ್ರವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆಯುತ್ತಿರುವ ಡಿವೈಎಫ್ಐ ರಾಜ್ಯ ಯುವ ಸಮ್ಮೇಳನದಲ್ಲಿ ಮಾತನಾಡಿದರು. ಅಭಿವೃದ್ಧಿ ಎಂದರೆ ಏನು? ಕೇವಲ ಖಾಸಗೀಕರಣದ ಮೂಲಕ ಎಲ್ಲ ಉತ್ಪಾದನಾ ವಲಯವನ್ನು ಬಂಡವಾಳಶಾಹಿಗಳ ಕೈಗೆ ನೀಡಿ ಅವರಿಂದ ತಮ್ಮ ಲಾಭ ಹೆಚ್ಚಿಸಿಕೊಳ್ಳುತ್ತೀರುವುದು ಅಭಿವೃದ್ಧಿನಾ? ಇಂದೊಂದು ವಂಚನೆಯ ಜಾಲವಾಗಿ ಹೋಗಿದೆ. ಸರ್ಕಾರದ ನಿರ್ವಹಣೆಯಲ್ಲಿ ಕೈಗಾರಿಕೆಗಳು ಇದ್ದರೆ ಅದು ದೇಶಕ್ಕೂ ಮತ್ತು ದೇಶದ ಜನತೆಗೂ ಲಾಭ. ಆದರೆ, ಇಂದು ಅಭಿವೃದ್ಧಿಯೆಂದು ಹೇಳುತ್ತಿರುವುದು ಅಭಿವೃದ್ಧಿ ಅಲ್ಲ ಎಂದರು. ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮಿ, ದೇಶದಲ್ಲಿ ಇಂದು ಯುವ ಜನರಿಗೆ ಉದ್ಯೋಗ ಇಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಯುವ ಜನರು ಎಚ್ಚರಗೊಂಡು ಸರ್ಕಾರದ ಈ ನೀತಿಗಳ ವಿರೋಧ ಹೋರಾಟ ಮಾಡಬೇಕು. ಯುವತಿಯರ ಸಮಸ್ಯೆಗಳತ್ತ ಗಮನ ಹರಿಸಬೇಕು. ಮಾಧ್ಯಮಗಳ ಪಾತ್ರ ಇದರಲ್ಲಿ ಮಹತ್ವವಿದ್ದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ತೊಡಗಬೇಕೆಂದು ಹೇಳಿದರು. ನಂತರ ಹಲವಾರು ಪ್ರಮುಖ ವಿಷಯ ನಿರ್ಧಾರಗಳನ್ನು ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಯಿತು.