ಪುಟ್ಟರಾಜ ಶ್ರೀಗಳ ಸೇವೆ ಅಮರ: ಅಂಗಡಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 9
ಪೋಷಕರಿಗೆ ಹೊರೆಯಾದ ಅಂಧ ಶಿಶುಗಳನ್ನು ಪೋಷಿಸಿ ಸರ್ವಸ್ವ ಧಾರೆ ಎರೆದು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಪರಮ ಪಂಡಿತ ಪುಟ್ಟರಾಜ ಗವಾಯಿಗಳ ನಿಸ್ವಾರ್ಥ ಸಾಮಾಜಿಕ ಸೇವೆ ಹಾಗೂ ತತ್ವ ಸಂದೇಶಗಳು ನಿತ್ಯ, ನಿರಂತರ ಎಂದು ಮಂಜುನಾಥ ಅಂಗಡಿ ಹೇಳಿದರು.
ಸ್ಥಳಿಯ ಡಾ. ಪಂಡಿತ ಪುಟ್ಟರಾಜ ಯುವಕ ಸಂಘ ವತಿಯಿಂದ ಈಚೆಗೆ ಲಿ. ಪಂಡಿತ ಪುಟ್ಟರಾಜ ಕವಿಗವಾಯಿಗಳ 100ನೇ ಜನ್ಮ ಶತಮಾನೋತ್ಸವ ಪ್ರಯುಕ್ತ ಪಂ. ಪುಟ್ಟರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಸಮಾಜ ನಮಗೇನು ನೀಡಿದೆ ಎನ್ನುವ ಮೊದಲು ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂಬ ಮಾತಿನಂತೆ ಅಂಧತ್ವ ಮೆಟ್ಟಿನಿಂತು ಸಂಗೀತ, ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತರ ಸೇವೆ ನೀಡುವ ಮೂಲಕ ನಾಡಿನ ಅಸಂಖ್ಯಾತ ಭಕ್ತರ ಮನದಲ್ಲಿ ಶಾಶ್ವತ ನೆಲೆಯೂರಿದ್ದಾರೆ. ಅಂತಹ ಪುಣ್ಯಾತ್ಮರು ನಡೆದ ಹಾದಿಯಲ್ಲಿ ನಾವು ಸಾಗಿ ಸಮಾಜಕ್ಕೆ ಸತ್ಯ ಸಂದೇಶ ನೀಡೋಣ ಎಂದರು. ಡಾ. ಪಂ. ಪುಟ್ಟರಾಜ ಗವಾಯಿಗಳ ನಿಸ್ವಾರ್ಥ ಸಾಮಾಜಿಕ ಸೇವೆಯನ್ನು ಇಡೀ ವಿಶ್ವವೇ ಕೊಂಡಾಡಿದೆ. ಆದರೆ, ಅವರ ನಿಸ್ವಾರ್ಥತೆ ಗುರುತಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಇನ್ನಾದರೂ ಅವರ ಧಾರ್ಮಿಕ ಚಿಂತನೆ ಗುರುತಿಸಿ ದೇಶದ ಅತ್ಯುನ್ನತ ಭಾರತ ರತ್ನ ಪುರಸ್ಕಾರ ನೀಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಬಸವರಾಜ ಅಂಗಡಿ, ಶರಣಪ್ಪ ಅಂಗಡಿ, ಕುಮಾರ ಕೊಟಗಿ, ಮಹೇಶ ಅಯ್ಯನಗೌಡರ, ಶರಣಪ್ಪ ಪೂಜಾರ, ವೀರೇಶ ನಿಡಶೇಶಿ, ಪ್ರಕಾಶ ಅಂಗಡಿ, ವೀರೂಪಾಕ್ಷ ಅಂಗಡಿ, ರುದ್ರೇಶ ಕೇರಿ, ಬಸು ರೊಟ್ಟಿ, ಮಲ್ಲು ಬಡಿಗೇರ, ಬಾಬು ಬಳ್ಳಾರಿ, ಶರಣು ಸಂಗಮದ, ಅರುಣ ಪೂಜಾರ, ರಾಚಪ್ಪ ಅಂಗಡಿ, ಪರಶುರಾಮ ಜಾಧವ ಮುಂತಾದವರು ಇದ್ದರು.