ಮನಸೂರೆಗೊಂಡ ನಾರಾಯಣರ ಪಿಟಿಲು ವಾದನ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 9
ಸ್ಥಳೀಯ ಹಿರೇಬಜಾರ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಯುವ ಬಸವ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಸಂಜೆ ನಡೆದ ಗದುಗಿನ ಪಂ. ಪುಟ್ಟರಾಜ ಗವಾಯಿಗಳ ಶಿಷ್ಯ ನಾರಾಯಣ ಹಿರೇಕೋಚಿ ಅವರ ಪಿಟಿಲು ವಾದನ ನೆರೆದಿದ್ದ ಸಭಿಕರ ಮನಸೂರೆಗೊಂಡಿತು.
ಮರವಿದ್ದು ಫಲವೇನು ಎನ್ನುವ ಅಕ್ಕಮಹಾದೇವಿ ವಚನ, ಸ್ವಾಮಿ ನೀನೆ ಶಾಶ್ವತ ನೀನೆ, ಸರಿಗಮ ಪದನಿಸ ಸಾವಿರದ ಶರಣು, ಪುರಂದರ ದಾಸರ ಲಕ್ಷ್ಮಿ ಬಾರಮ್ಮಾ, ಕರೆದರೆ ಕೇಳದೇ, ಕೈಲಾಸವಾಸ, ಚಂದ್ರಕೌಂಸರಾಗ, ಚಕೋಂಗೆ, ಚಂದ್ರಮಾನ, ಬಯಲು, ಬಯಲನು ಬಿತ್ತಿ ಇಂತಹ ಹಲವಾರು ಹಾಡುಗಳನ್ನು ಪೀಟಿಲು ವಾದನದಲ್ಲಿ ನುಡಿಸುವ ಮೂಲಕ ಜತೆಗೆ ರವಿಕುಮಾರ ಆಳಂದ ತಬಲಾ ಸಾಥಿಗೆ ಸಭಿಕರ ತಲೆಯಾಡಿದರು.
ಗ್ರಂಥಪಾಲಕ ಎಸ್.ಐ. ಪತ್ತಾರ ಮಾತನಾಡಿ, ಸಂಗೀತ ಮನಸ್ಸನ್ನು ಅರಳಿಸುತ್ತದೆ. ಪ್ರಪಂಚದ ಎಲ್ಲ ಭಾಷೆಗಳ ತಾಯಿಯಾದ ಸಂಗೀತ ವಿಶ್ವಯಾಪಿಯಾದರೂ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಜಗದ ಅಂಗಳದಲ್ಲಿ ವಿಶಿಷ್ಟ ಸ್ಥಾನಮಾನ ಪಡೆದಿದೆ ಎಂದರು.
ಬಸವರಾಜ ಶೀಲವಂತರ ಮಾತನಾಡಿ, ಕರ್ನಾಟಕ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ವಿಶ್ವದ ದಿಗ್ಗಜರು ಎನಿಸಿರುವ ಪಂ. ದಿ. ಭೀಮಸೇನ ಜೋಶಿ, ಬಸವರಾಜ ರಾಜಗುರು, ದಿ. ಗಂಗೂಬಾಯಿ ಹಾನಗಲ್, ಪಂ. ಜಸರಾಜ, ಸೀತಾರವಾದಕ ಬಾಲೇಖಾನರಂತಹ ಮಹಾನು ಬಾಹುರು ಸಂಗೀತ ಮೂಲಕ ವಿಶ್ವದ ಜನಮನದಲ್ಲಿ ಶಾಶ್ವತ ನೆಲೆಯೂರಿದ್ದಾರೆ ಎಂದರು.
ಯುವ ಬಸವ ಕೇಂದ್ರ ಅಧ್ಯಕ್ಷ ಸಾಗರ ವಾಲಿ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಸಾಲಿಮಠ, ಅಶೋಕ ಹೊನವಾಡ, ಲಿಂಗರಾಜು ಹಿರೇಮನಿ, ರವೀಂದ್ರ ಹೊನವಾಡ, ಬಿ.ವೈ. ಮರದ, ಎಂ.ಎಸ್. ರೊಟ್ಟಿ, ಬಿ.ಸಿ. ಹೊಳಿ, ಸುರೇಶ ಚೋಳಿನ, ವೀರೇಶ ವಾಲಿ, ಕೆ.ಎಂ. ವಸ್ತ್ರದ, ಎಸ್.ಎಸ್. ವಾಲಿ ವೇದಿಕೆಯಲ್ಲಿದ್ದರು. ಪೀಟಿಲು ವಾದಕ ನಾರಾಯಣ ಹಿರೇಕೋಚಿ, ತಬಲಾ ಸಾಥ ನೀಡಿದ ರವಿಕುಮಾರ ಆಳಂದ ಅವರನ್ನು ಸನ್ಮಾನಿಸಲಾಯಿತು.