ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾರ್ಥಿಗಳ ಬೀಳ್ಕೊಡುಗೆ
ಗಜೇಂದ್ರಗಡ: ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಅಗತ್ಯ. ಈ ದಿಸೆಯಲ್ಲಿ ಶಿಕ್ಷಕರ ಮತ್ತು ಪಾಲಕರ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಖಾಜಾಹುಸೇನ ಮುಧೋಳ ಹೇಳಿದರು.
ಸಮೀಪದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ವಿಜ್ಞಾನ ವಸ್ತು ಪ್ರದರ್ಶನ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕುಟುಂಬದ ಬಡತನ, ಅನಕ್ಷರತೆ ನಿವಾರಿಸುವ ಶಕ್ತಿ ಶಿಕ್ಷಣಕ್ಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ವಿದ್ಯೆ ಕಲಿಸಲು ಮುಂದಾಗಬೇಕು ಎಂದರು.
ವೈದ್ಯಾಧಿಕಾರಿ ಸೋಮಪ್ಪ ರಾಠೋಡ ಮಾತನಾಡಿ, ಶಿಕ್ಷಕರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು.
ಪ್ರಾಚಾರ್ಯ ಬಸವರಾಜ ತಮ್ಮಿನಾಳ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಮಂಜುನಾಥ ಮುರಡಿ, ಪ್ರಾಚಾರ್ಯ ಎಸ್.ಎಸ್. ಕರ್ಜಗಿ, ಹೇಮಲತಾ ಬೊಮ್ಮನಳ್ಳಿ, ವೀರಪ್ಪ ಬಮ್ಮಸಾಗರ, ಮಂಜುನಾಥ ಮೇಟಿ, ಪಿ.ಡಿ. ದಬಾಲಿ, ಬಸವರಾಜ ಬಳಿಗಾರ, ಶಿವಕ್ಕ ತೋಟದ, ರವಿ ಬೇಲೂರಪ್ಪ, ನಿರಂಜನ ಮಾಲಿಪಾಟೀಲ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.