ಸ್ತ್ರೀಯರಲ್ಲಿ ದೇವತೆ ಗುಣ: ಶಿವಲಿಂಗ ಶಾಸ್ತ್ರಿ
ಮುಂಡರಗಿ: ಸಹನೆ, ತಾಳ್ಮೆ, ಕ್ಷಮಾಗುಣ ಮೊದಲಾದ ಗುಣಗಳು ಮಹಿಳೆಯರಲ್ಲಿ ಮನೆ ಮಾಡಿದ್ದರಿಂದ ಮಹಿಳೆಯರನ್ನು ನಾವೆಲ್ಲ ದೇವತೆಗಳಿಗೆ ಹೋಲಿಸುತ್ತೇವೆ. ಜಗತ್ತಿನ ಯಾವುದೇ ದೇಶ ಮಹಿಳೆಯರಿಗೆ ನೀಡದೆ ಇರುವ ಪವಿತ್ರ ಸ್ಥಾನವನ್ನು ಭಾರತೀಯರು ಮಹಿಳೆಯರಿಗೆ ನೀಡಿದ್ದಾರೆ ಎಂದು ಶಿವಲಿಂಗಯ್ಯ ಶಾಸ್ತ್ರಿಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಹಾಮಂಗಲ ಹಾಗೂ 1008 ಮಹಿಳೆಯರಿಗೆ ಉಡಿ ತುಂಬುವ ಸಮಾರಂಭದಲ್ಲಿ ಮಾತನಾಡಿದರು.
ಒಂದು ಜೀವಕ್ಕೆ ತನ್ನ ಉದರದಲ್ಲಿ ಪ್ರಾಣ ದೀಕ್ಷೆ ನೀಡುವ ಮೂಲಕ ಮಹಿಳೆ ಬ್ರಹ್ಮನಿಗೆ ಸಮಾನಳಾಗುತ್ತಾಳೆ. ಆ ಕಾರಣದಿಂದ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ವಿವಿಧ ಶುಭ ಸಮಾರಂಭಗಳಲ್ಲಿ ಪವಿತ್ರ ವಸ್ತುಗಳಿಂದ ಮಹಿಳೆಯರ ಉಡಿ ತುಂಬಿ ಅವಳ ಬಯಕೆ ಈಡೇರಿಸುತ್ತಿದ್ದರು. ಉಡಿ ತುಂಬುವ ಕಾರ್ಯಕ್ಕೆ ಭಾವನಾತ್ಮಕ ಸಂಬಂಧವಿದ್ದು, ಎಲ್ಲವನ್ನೂ ವೈಚಾರಿಕತೆ ದೃಷ್ಟಿಯಿಂದ ನೋಡಬಾರದು ಎಂದರು.