ಅಸಮರ್ಪಕ ಕುಡಿವ ನೀರು ಪೂರೈಕೆ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 10
ಪುರಸಭೆಯಿಂದ ಪಟ್ಟಣದ ಜನತೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡುತ್ತಿಲ್ಲ ಹೀಗಾಗಿ ಜನರು ನೀರಿನ ಆಭಾವದಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಆರೋಪಿಸಿ ಡಿವೈಎಫ್ಐ ನೇತೃತ್ವದಲ್ಲಿ 1,2,3ನೇ ವಾರ್ಡಿನ ಸಾರ್ವಜನಿಕರು ಖಾಲಿ ಕೊಡಗಳೊಂದಿಗೆ ಸೋಮವಾರ ಪುರಸಭೆಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪುರಸಭೆ ಸದಸ್ಯ ಹಾಗೂ ಸಿಪಿಐಎಂ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಕಳೆದ 6 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸಿ ಹಾಹಾಕಾರ ಎದ್ದಿದೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಹಲವಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ಕ್ಯಾರೆ ಎನ್ನುತ್ತಿಲ್ಲ. ಪಟ್ಟಣದಲ್ಲಿ ವಾರಕ್ಕೊಂದು ಬಾರಿ ಕೇವಲ 1 ಗಂಟೆ ಮಾತ್ರ ಕುಡಿಯುವ ನೀರು ಸರಬರಾಜಾಗುತ್ತಿದ್ದು. ಇದರಿಂದ ಸಮರ್ಪಕ ನೀರು ದೊರೆಯದೆ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜತೆಗೆ ದಿನದ ದುಡಿಮೆ ಬಿಟ್ಟು ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಇದೆ. ಪುರಸಭೆಯವರು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ನಿರ್ಲಕ್ಷ್ಯ: ಪುರಸಭೆಯ ನಿರ್ಲಕ್ಷ ದುರ್ಬಳಕೆ ಮಾಡಿಕೊಂಡ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕದವರು ನೀರಿನ ದರವನ್ನು ಮನಬಂದಂತೆ ಏರಿಸುವ ಮೂಲಕ ಜನಸಾಮಾನ್ಯರ ಸುಲಿಗೆಗೆ ಮುಂದಾಗಿದ್ದಾರೆ. ಸರ್ಕಾರ ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ ಲಕ್ಷಾಂತರ ಹಣ ಬಿಡುಗಡೆ ಮಾಡಿದೆ. ಆದರೆ, ವ್ಯವಸ್ಥೆಯ ಲೋಪದಿಂದಾಗಿ ಯೋಜನೆ ಹಳ್ಳ ಹಿಡಿಯುತ್ತವೆ ಎನ್ನುವುದಕ್ಕೆ ಗಜೇಂದ್ರಗಡ ಪುರಸಭೆಯ ಆಡಳಿತ ನಿದರ್ಶನ ಎಂದು ಆರೋಪಿಸಿದರು. ಬೆಳಗ್ಗೆ 11 ಗಂಟೆಗೆ ಪುರಸಭೆಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಪುರಸಭಾ ಅಧ್ಯಕ್ಷರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಲಿಖಿತ ಭರವಸೆ ನೀಡುವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಸುದೀರ್ಘ 5-6 ಗಂಟೆಗಳವರೆಗೂ ಪ್ರತಿಭಟನೆ ಮುಂದುವರಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಹಾಗೂ ಮುಖ್ಯಾಧಿಕಾರಿ ಕೆ.ಐ. ನಾಗನೂರ ಅವರು ಪ್ರತಿಭಟನೆ ನಿರತ ಮುಖಂಡರ ಜತೆ ಚರ್ಚಿಸಿ 10 ದಿನ ಕಾಲಾವಕಾಶ ನೀಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯತ್ನಿಸುತ್ತೇವೆ ಎಂದು ಮುಖ್ಯಾಧಿಕಾರಿಯವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು.
ಪೀರು ರಾಠೋಡ್, ಬಾಲು ರಾಠೋಡ, ಬಾಳಪ್ಪ ಪವಾರ, ಡಾ. ಪಿ.ಬಿ. ರಾಮಜಿ, ರೇಣಪ್ಪ ಇಂಗಳೆ, ಮಾರುತಿ ರಾಮಜಿ, ಕಳಕಪ್ಪ ಕಾಸಾಯಿ, ಬಾಳು ತಿರಕೋಜಿ, ಖಾಜೇಸಾಬ ತಾಳಿಕೋಟಿ, ಶಿವಾಜಿ ಬಾಗೋಜಿ, ಲಕ್ಷ್ಮಣ ರೇಣಿ, ಅಲ್ಲಾಭಕ್ಷಿ ಆನಿ, ಮೈಬೂ ಹವಾಲ್ದಾರ, ಇಮಾಮ ಆನಿ, ಪಾರ್ವತಿ ಬರಗಿ, ಭೀಮವ್ವ ಜಾನಾಯಿ, ವಿಜಯಲಕ್ಷ್ಮೀ ಮೇಗಲಮನಿ, ಭೀಮಕ್ಕ ಹಾಳಕೇರಿ, ಲಕ್ಷ್ಮವ್ವ ತಿರಕೋಜಿ, ಶೀತವ್ವ ಅಗಸರ, ಲಕ್ಷ್ಮವ್ವ ರೇಣಿ, ರೇಣುಕಾ ಕರಾಡೆ, ರೇಣವ್ವ ದುಮ್ಮಾಳ, ಬಸಮ್ಮ ಕುಂಟೋಜಿ, ರೇಣಮ್ಮ ನಲವಡಿ, ಪಾರ್ವತಿ ಹೊಸಮನಿ, ರತ್ನಾ ಹಾಳಕೇರಿ, ಪ್ರೇಮಾ ಅರಗಂಜಿ, ಗೀತಾ ಅರಗಂಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.