ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಚಿತ ಔಷಧಿಗೆ ಹಣ ವಸೂಲಿ: ಆರೋಪ

Lingaraj Badiger
Updated On : 11 Mar 2014, 11:59 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 10
ಉಚಿತವಾಗಿ ರೇಷ್ಮೆ ಬೆಳೆಗಾರರಿಗೆ ಲಭ್ಯವಾಗದ ಕ್ರಿಮಿನಾಶಕವೊಂದು ಖಾಸಗಿ ಅಂಗಡಿಯಲ್ಲಿ ಲಭ್ಯವಾಗುತ್ತಿರುವುದು ಅನೇಕ ಗುಮಾನಿಗಳಿಗೆ ಕಾರಣವಾಗಿದ್ದು, ಇಲಾಖೆ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿ ರೈತರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಖರೀದಿಸಿದ್ದ ಔಷಧಿ ಪ್ಯಾಕೆಟ್ ಕೈಯಲ್ಲಿ ಹಿಡಿದು ರೈತರು ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಶನಿವಾರ ದಿಢೀರನೆ ಅಂಗಡಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರ ರೈತ ಈರಣ್ಣ ಕಲ್ಯಾಣಿ, ಬಸವರಾಜ ಪೂಜಾರ, ಫಕೀರೇಶ ಕರಿಗಾರ ಮಾತನಾಡಿ, ರೇಷ್ಮೆ ಹುಳು ಸಾಕಾಣಿಕಾ ಮನೆಗೆ ಹೊಡೆಯುವ ಸೊಂಕು ನಿವಾರಣಾ ಔಷಧಿ (ಡೆಕಾಲ್) ಸರ್ಕಾರದಿಂದ ಉಚಿತವಾಗಿ ಪೂರೈಕೆಯಾಗುವಂತಹ ಔಷಧಿ 2 ವರ್ಷಗಳಿಂದ ರೇಷ್ಮೆ ಬೆಳೆಗಾರರಿಗೆ ಪೂರೈಸಿಲ್ಲ. ಇದರಿಂದ ರೇಷ್ಮೆ ಹುಳುಗಳಿಗೆ ರೋಗ ತಗುಲಿ ಇಳುವರಿಯ ಪ್ರಮಾಣ ಕಡಿಮೆಯಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ಇದೇ ಔಷಧಿ ಪಟ್ಟಣದ ಶ್ರೀ ಶಿವ ರೇಷ್ಮೆ ರೈತ ಬಂಧು ಕೇಂದ್ರದಲ್ಲಿ ಹಣ ನೀಡಿದರೆ ಸಿಗುತ್ತಿದ್ದು, ಈ ಔಷಧಿಯನ್ನು ಇಲಾಖೆಯವರೇ ರೈತರಿಗೆ ಮೋಸ ಮಾಡಿ ಖಾಸಗಿ ಅಂಗಡಿಯವರಿಗೆ ವಿತರಿಸಿ ರೈತರಿಂದ ಹಣ ವಸೂಲಿ ಮಾಡುವ ದಂಧೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಅಂಗಡಿಗೆ ಪೂರೈಕೆ-ಶಂಕೆ: ಪಟ್ಟಣದಲ್ಲಿ ಸುಮಾರು 50 ಜನ ರೇಷ್ಮೆ ಬೆಳೆಗಾರರಿದ್ದು, ಪ್ರತಿಯೊಬ್ಬರೂ ರು. 60 ಹಣ ನೀಡಿ ಈ ಔಷಧಿ ಖರೀದಿಸಿದ್ದಾರೆ. ವಿಪರ್ಯಾಸವೆಂದರೆ 3 ತಿಂಗಳ ಹಿಂದೆ ಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರಧಾನ ಸಂಪಾದಕರು ಹಾಗೂ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಉಚಿತ ಔಷಧಿ ಪೂರೈಸಲು ಸರ್ಕಾರ ರು. 2.50 ಲಕ್ಷ ಹಣ ನೀಡಿದ್ದು, ಶೀಘ್ರದಲ್ಲಿಯೇ ಔಷಧಿ ಖರೀದಿಸಿ ವಿತರಿಸುವುದಾಗಿ ಹೇಳಿ ಪಾರಾಗಿ ಹೋಗಿದ್ದರು. ಆದರೆ, ಇಲ್ಲಿಯ ವರೆಗೂ ಯಾವುದೇ ತೆರನಾದ ಔಷಧಿ ನೀಡಿಲ್ಲ ಎಂದು ದೂರಿದರು. ಅಲ್ಲದೇ ಸರ್ಕಾರದಿಂದ ಪೂರೈಕೆಯಾದ ಔಷಧಿ ನೇರವಾಗಿ ಖಾಸಗಿ ಅಂಗಡಿಯವರಿಗೆ ಪೂರೈಸುತ್ತಿದ್ದು, ಇದರಲ್ಲಿ ಅಧಿಕಾರಿಗಳ ಪಾಲು ಇದೆ ಎಂಬ ಶಂಕೆ ವ್ಯಕ್ತಪಡಿಸಿದರು.
ಗೋಲ್‌ಮಾಲ್ ಪತ್ತೆ ಹಚ್ಚಿ: ರೈತರು ಶನಿವಾರ ಹಠಾತ್ ದಾಳಿ ಮಾಡಿದಾಗ ಈ ಔಷಧಿ ಪತ್ತೆಯಾಗಿದ್ದು, ರೈತರು ಇಲಾಖೆ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಶ್ನಿಸಿದಾಗ ತಬ್ಬಿಬ್ಬಾದರು. ಆದರೆ, ಇಲಾಖೆ ಅಧಿಕಾರಿಗಳ ಕ್ರಮದ ವಿರುದ್ಧ ಹರಿಹಾಯ್ದ ರೈತರು ನೇರವಾಗಿ ಇಲಾಖೆಗೆ ಪೂರೈಕೆಯಾಗದ ಔಷಧಿ ಖಾಸಗಿಯವರಲ್ಲಿ ಹೇಗೆ ಲಭ್ಯವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ರೈತರಿಗೆ ಪೂರೈಕೆಯಾಗಬೇಕಾದ ಔಷಧಿ ವಿತರಣೆಯಲ್ಲಿ ಏನೋ ಗೋಲ್‌ಮಾಲ್ ನಡೆಯುತ್ತಿದ್ದು, ಅದನ್ನು ಪತ್ತೆ ಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಅಧಿಕಾರಿಯಿಂದ ಹಾರಿಕೆ ಉತ್ತರ: ಜಿಲ್ಲಾ ರೇಷ್ಮೆ ಉಪ ನಿರ್ದೇಶಕ ಎಸ್.ಕೆ. ಬುರಡಿ ಈ ಕುರಿತು ಮಾತನಾಡಿ, 2 ವರ್ಷಗಳಿಂದ ಸರ್ಕಾರ ಉಚಿತ ಔಷಧಿ ಪೂರೈಸಿಲ್ಲ. ಸದ್ಯ ರು. 2.85 ಲಕ್ಷ ಹಣ ಬಿಡುಗಡೆಯಾಗಿದ್ದು, ಔಷಧಿ ಖರೀದಿಸಿ ಪೂರೈಸುವಂತೆ ತಿಳಿಸಿದ್ದು, ಕ್ರಮ ಕೈಗೊಳ್ಳುವುದಾಗಿ ಹಾರಿಕೆ ಉತ್ತರ ನೀಡುತ್ತಾರೆ. ಮೈಸೂರು ಮೂಲದ ಸೋಮಶೇಖರಯ್ಯ ಶಿವಮೂರ್ತಯ್ಯ ಹಿರೇಮಠ ಎಂಬ ಖಾಸಗಿ ವ್ಯಕ್ತಿಯೊಬ್ಬ ಈ ಉಚಿತ ಔಷಧಿಯನ್ನು ರೈತರಿಂದ ಹಣ ಪಡೆದು ರಾಜಾರೋಷವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವೊಬ್ಬ ಇಲಾಖೆ ಅಧಿಕಾರಿಗಳು ಗಮನಹರಿಸದೇ ಇರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದ್ದು, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಇಲಾಖೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಪ್ರತಿಭಟನಾ ನಿರತ ರೈತರು ಆಗ್ರಹಿಸಿದ್ದಾರೆ.
ಹನುಮಂತಪ್ಪ ಪೂಜಾರ, ಮಲ್ಲಪ್ಪ ಕರಿಗಾರ, ಈರಣ್ಣ ದೇವಗಿರಿ, ಎಂ.ಪಿ. ಮೂರಶಿಳ್ಳಿ, ಇಸ್ಮಾಯಿಲ್ ಡಾಲಾಯತ, ಅಶೋಕ ವರವಿ, ನಿಂಗಪ್ಪ ಗುಡ್ಡದಪುರ, ವೈ.ವಿ. ಶೆಟ್ಟರಡ್ಡಿ ಇನ್ನು ಅನೇಕ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement