ಕಾಂಗ್ರೆಸ್ ತೆಕ್ಕೆಗೆ ಗದಗ ನಗರಸಭೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಅತ್ಯಂತ ಕುತೂಹಲ ಕೆರಳಿಸಿದ್ದ ಹಾಗೂ ಹಲವಾರು ತಿಂಗಳುಗಳಿಂದ ಸದಸ್ಯರಾಗಿ ಆಯ್ಕೆಯಾಗಿಯೂ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗದ ಹಿನ್ನೆಲೆಯಲ್ಲಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದು ಸದಸ್ಯರಿಗೆ ಸೋಮವಾರ ಮುಕ್ತಿ ಸಿಕ್ಕಿತು.
ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಕುರಿತು ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಐ.ಜೆ. ಗದ್ಯಾಳ ಘೋಷಣೆ ಮಾಡಿದರು.
ಸರ್ಕಾರದ ನಿರ್ದೇಶನದಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷದ 20ನೇ ವಾರ್ಡಿನ ಸದಸ್ಯೆ ರುದ್ರವ್ವ ಕೆರಕಲಮಟ್ಟಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡಿನ ಸದಸ್ಯ ಕೃಷ್ಣಾ ಪರಸಪ್ಪ ಪರಾಪುರ ನಾಮಪತ್ರ ಸಲ್ಲಿಸಿದ್ದರು.
ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ, ಕಾಂಗ್ರೆಸ್-22, ಬಿಎಸ್‌ಆರ್ 7, ಬಿಜೆಪಿ-5, ಕೆಜೆಪಿ-1 ಸ್ಥಾನ ಹೊಂದಿದ್ದು, ಬಹುಮತ ಕೊರತೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗಿಳಿಯದೇ ಇರುವುದರ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.
ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ, ನಗರದ ಕುಡಿಯುವ ನೀರಿನ ಸಮಸ್ಯೆ, ನೈರ್ಮಲೀಕರಣ, ಬೀದಿದೀಪ ಹಾಗೂ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸಂಪೂರ್ಣ ಮೂಲ ಸೌಲಭ್ಯ ಕಲ್ಪಿಸಲು ಸರ್ವ ಸದಸ್ಯರು ಹಾಗೂ ಪಕ್ಷದ ಹಿರಿಯ ನಾಯಕರ ಸಲಹೆ-ಸೂಚನೆ ಮೇರೆಗೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಎಪಿಎಂಸಿ ಅಧ್ಯಕ್ಷ ಡಿ.ಆರ್. ಪಾಟೀಲ ಶುಭಕೋರಿದರು. ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಪ್ರಕಾಶ ಬೊಮ್ಮನಳ್ಳಿ, ರಾಮಣ್ಣ ಫಲದೊಡ್ಡಿ, ಭರತ ಇರಾಳ ಸೇರಿದಂತೆ ನಗರಸಭೆ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ಮಧ್ಯಾಹ್ನ 2ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ಚುನಾವಣಾಧಿಕಾರಿ ಐ.ಜೆ. ಗದ್ಯಾಳ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವ ಹಿನ್ನೆಲೆಯಲ್ಲಿ ಕೆರಕಲಮಟ್ಟಿ ಹಾಗೂ ಪರಾಪುರ ಅವರ ಆಯ್ಕೆಯನ್ನು ಘೋಷಿಸುತ್ತಿದ್ದಂತೆ, ನಗರಸಭಾ ಭವನದ ಆವರಣದಲ್ಲಿ ನೆರೆದಿದ್ದ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹಾಗೂ ಎಲ್ಲಾ ವಾರ್ಡ್‌ಗಳ ಕಾರ್ಯಕರ್ತರು ಸಿಹಿ ಹಂಚಿ ಗುಲಾಲ್ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.