ಮಹಿಳೆ ತನ್ನ ಆತ್ಮ ರಕ್ಷಣೆ ಮಾಡಿಕೊಳ್ಳಲಿ: ದಂಡಿನ
ಗದಗ: ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಕರೆ ನೀಡಿದರು.
ಅವರು ಸ್ಥಳೀಯ ಕೆಎಸ್‌ಎಸ್ ಕಾಲೇಜಿನ ವಾಣಿಜ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನ ಮಹಿಳಾ ವೇದಿಕೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆ ಸಾಕಷ್ಟು ಮುಂದುವರಿದಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇಶದ ಅಭಿವೃದ್ಧಿಗೆ ಭಾಗವಹಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಶ್ರಮಿಸಬೇಕು ಎಂದರು.
ಜೆ.ಟಿ. ಕಾಲೇಜಿನ ಪ್ರಾಧ್ಯಾಪಕಿ ಶಕುಂತಲಾ ಸಿಂಧೂರ ಮಾತನಾಡಿ, ಮಹಿಳೆಗೆ ಸಮಾನತೆ ಒದಗಿಸಿದರೆ ದೇಶದ ಅಭಿವೃದ್ಧಿ ತನ್ನಿಂದ ತಾನೇ ಆಗುತ್ತದೆ. ಮಹಿಳೆ ಮತ್ತು ಪುರುಷ ಜೀವನ ರಥದ 2 ಗಾಲಿಗಳಿದ್ದಂತೆ, ಬದುಕು ಹಸನಾಗಬೇಕಾದರೆ ಇಬ್ಬರ ಪಾತ್ರ ಮುಖ್ಯವಾಗಿದೆ ಎಂದರು.
ರೂಪಾಲಿ ಜಮಾದಾರ ಮಾತನಾಡಿ, ಮಹಿಳೆ ಸಮಾಜದಲ್ಲಿ ಬೆಳೆಯಬೇಕಾದರೆ ಅವಳಿಗೆ ಸಮಾನತೆ ಅವಶ್ಯ ಎಂದರು. ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಶೀದಾ ಮಾಟಲದಿನ್ನಿ, ಪ್ರಾಧ್ಯಾಪಕಿ ಸಲ್ಮಾ, ಅರ್ಚನಾ, ಜ್ಯೋತಿ ಹಾಗೂ ಎಫ್.ಬಿ. ಜಾಲಿಹಾಳ ಉಪಸ್ಥಿತರಿದ್ದರು. ಸೀಮಾ ಹಾಗೂ ಸ್ನೇಹಾ ಪ್ರಾರ್ಥಿಸಿದರು. ಡಾ. ಟಿ.ಎನ್. ಗೋಡಿ ಸ್ವಾಗತಿಸಿದರು. ಕಾರ್ತಿಕ ಹಾಗೂ ದೇವರಾಜ ನಿರೂಪಿಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಜ್ಯೋತಿ ಅರಹುಣಸಿ ವಂದಿಸಿದರು.