ಎಪಿಎಂಸಿ ಉಪಚುನಾವಣೆ: ಉಮೇಶ ವೀರಾಪುರ ಆಯ್ಕೆ
ಕನ್ನಡಪ್ರಭ ವಾರ್ತೆ, ರೋಣ, ಮಾ. 11
ಎಪಿಎಂಸಿ ಸದಸ್ಯರಾಗಿದ್ದ ವೀರಪ್ಪ ಮಾರನಬಸರಿ ಅವರು ನಿಧನದಿಂದ ತೆರುವಾದ ಅಬ್ಬಿಗೇರಿ ಎಪಿಎಂಸಿ ಕೃಷಿಕರ ಕ್ಷೇತ್ರಕ್ಕೆ ಭಾನುವಾರ ಉಪ ಚುನಾವಣೆ ಜರುಗಿದ್ದು, ಇದರ ಎಣಿಕೆ ಕಾರ್ಯ ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜರುಗಿತು. ಅಬ್ಬಿಗೇರಿ ಗ್ರಾಮದ ಉಮೇಶ ಬಸಪ್ಪ ವೀರಾಪುರ 85 ಮತಗಳ ಅಂತರದಿಂದ ಎಪಿಎಂಸಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 2046 ಮತದಾನವಾಗಿದ್ದು, ಇದರಲ್ಲಿ ಉಮೇಶ ವೀರಾಪುರವರಿಗೆ 1050 ಮತಗಳು, ಪ್ರತಿಸ್ಪರ್ಧಿ ಅಂದಪ್ಪ ವೀರಭದ್ರಪ್ಪ ವೀರಾಪುರಗೆ 965 ಮತಗಳು ಬಿದ್ದಿದ್ದು, ಇದರಲ್ಲಿ 31 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾ ಅಧಿಕಾರಿ ಎಸ್.ಎ. ಸೂಡಿಶೆಟ್ಟರ ತಿಳಿಸಿದರು. ಮತ ಎಣಿಕೆ ವೇಳೆಯಲ್ಲಿ ತಹಸೀಲ್ದಾರ್ ಎ.ಜಿ. ಪಂಡೀತ, ಉಪ ತಹಸೀಲ್ದಾರ್ ಎನ್.ಎಸ್. ಕೂಡಲ್, ಚುನಾವಣಾಧಿಕಾರಿಯಾದ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ, ಆರ್.ಎನ್. ಜೋಶಿ, ಮಾನೆ ಮುಂತಾದವರು ಉಪಸ್ಥಿತರಿದ್ದರು.
ಉಮೇಶ ವೀರಾಪುರ ಎಪಿಎಂಸಿಯ ಅಬ್ಬಿಗೇರಿ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗುತ್ತಿದಂತೆ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಸುರೇಶ ನಾಯ್ಕರ, ಬಸವರಾಜ ಮಾರನಬಸರಿ, ಐ.ಎಸ್. ಶಿಲವಂತರ, ಭರಮಣ್ಣ ಹನಮನಾಳ, ಅಶೋಕ ಪವಾಡಶೆಟ್ಟಿ, ರವಿ ಯತ್ನಟ್ಟಿ, ಸಿದ್ದು ಹಿರೇಗೌಡ್ರ, ವೀರಣ್ಣ ಸವಡಿ, ಮುತ್ತಣ್ಣ ಲದ್ದಿ, ಶರಣಪ್ಪ ಮಸಗಿ, ಡಿ.ಆರ್. ಬಂಡಿವಡ್ಡರ, ಮಲ್ಲಪ್ಪ ಚೋರಗಸ್ತಿ, ಕೃಷ್ಣಾ ದೇಶಪಾಂಡೆ, ಸುರೇಶ ಬಿಳೆಕಲ್ಲ, ಭರಮಗೌಡ ಮಡೆಗೌಡ್ರ ಮುಂತಾದವರು ಭಾಗವಹಿಸಿದ್ದರು.