ಗಜೇಂದ್ರಗಡದಲ್ಲಿ ಮಾವಿನಕಾಯಿ ಫಸಲು ಹಾನಿ
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದಲ್ಲಿ ಹುಲುಸಾಗಿ ಬೆಳೆದಿದ್ದ ಅಪಾರ ಪ್ರಮಾಣ ಮಾವಿನಕಾಯಿ ಫಸಲು ಸೋಮವಾರ ಸಂಜೆ ಸುರಿದ ಅಕಾಲಿಕ ಮಳೆ ಜತೆ ಆಲಿಕಲ್ಲು ರಭಸಕ್ಕೆ ನೆಲಕ್ಕುರಳಿ ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ಸಂಕಷ್ಟಕ್ಕೀಡಾಗಿದ್ದಾನೆ.
ಸಮೀಪದ ಜಿಗೇರಿ ಗ್ರಾಮ ಪರಶುರಾಮ ರಾಠೋಡ ಎಂಬುವರು ತಮ್ಮ 5 ಎಕರೆ ತೋಟದಲ್ಲಿ ಧಾರವಾಡ ಆಪೋಸ್ ತಳಿಯ 470 ಮಾವಿನ ಗಿಡದಲ್ಲಿ ಬೆಳೆದಿದ್ದ ಮಾವಿನಕಾಯಿಗಳು ಅಕಾಲಿಕ ಮಳೆಗೆ ತುತ್ತಾಗಿ ಗಿಡಗಳು ಉರುಳಿವೆ. 10 ವರ್ಷ ಹಿಂದೆ ನೆಟ್ಟಿರುವ ಗಿಡದಿಂದ 5 ವರ್ಷ ಕಳೆದ ಬಳಿಕ ಪ್ರತಿ ವರ್ಷ ರು. 3.5 ಲಕ್ಷ ಆದಾಯ ಬಂದಿದೆ. ಆದರೆ, ಪ್ರಸ್ತುತ ಎಲ್ಲವೂ ತಲೆಕೆಳಗಾಗಿದೆ. ಸಾಲಾಸೂಲ ಮಾಡಿ ಕಷ್ಟಪಟ್ಟು ಬೆವರು ಸುರಿಸಿ ಬೆಳೆಸಿದಂತಹ ಮಾವು ಬೆಳೆ ಎಲ್ಲಾ ಮಳೆ, ಗಾಳಿಗೆ ಕೊಚ್ಚಿಕೊಂಡು ಹೋಗೈತ್ರಿ ಎಂದು ತಮ್ಮ ಅಳಲು ತೋಡಿಕೊಂಡರು.
ಸತತ ಬರಗಾಲದ ಬವಣೆಗೆ ತುತ್ತಾಗಿ ಬರದ ನಾಡೆಂದೆ ಹೆಸರಾದ ರೋಣ ತಾಲೂಕಿನಲ್ಲಿ ಈ ಬಾರಿ ಅಲ್ಲಲ್ಲಿ ಬೆಳೆದಿರುವ ಋತುಮಾನದ ರಾಜನೆಂದು ಕರೆಯಿಸಿಕೊಳ್ಳುವ ಮಾವಿನ ಫಸಲು ನಿರೀಕ್ಷೆಗೂ ಮೀರಿ ಬೆಳೆಯುವ ಎಲ್ಲ ಲಕ್ಷಣಗಳು ಕಂಡುಬಂದಿತ್ತು. ಮಾಮರಗಳ ಟೊಂಗೆಗಳಲ್ಲಿ ಮೈದುಂಬಿ ಕೊಂಡಿರುವ ಗೊಂಚಲುಗಳು ಈ ಸಲ ಬಂಪರ್ ಫಸಲು ನೀಡಬಹುದೆಂಬ ಆಶಾಭಾವನೆ ರೈತ ಸಮುದಾಯದಲ್ಲಿ ಮೂಡಿಸಿತ್ತು. ಆದರೆ, ಅಕಾಲಿಕ ಆಲಿಕಲ್ ಮಳೆ ಎಲ್ಲವನ್ನೂ ನಾಶ ಪಡಿಸಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೋಣ ತಾಲೂಕಿನ ರೈತರ ಮಾವು ಮೈತುಂಬ ಹೂವುಗಳನ್ನು ಹೊದ್ದುನಿಂತು ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿತ್ತು. ಮಾವು ಬೀಡುವ ಋತುಮಾನ ಪ್ರಾರಂಭದ ಈ ದಿನಗಳಲ್ಲಿ ಮೈತುಂಬ ಹೂವು ಮುಡಿದುಕೊಂಡು ಬಳಕುತ್ತಿರುವ ಮರಗಳು ನೋಡಿ ರೈತರು ಸಂತಸಪಡುತ್ತಿದ್ದರು. ಮುಂದೆ ಯಾವುದೇ ರೋಗಬಾರದಂತೆ ಕರುಣಿಸು ತಾಯಿ ಎಂದು ಪ್ರಕೃತಿ ಮಾತೆಯಲ್ಲಿ ಮೊರೆವಿಟ್ಟಿದ್ದರು. ಆದರೆ, ಪ್ರಕೃತಿಯ ರೂಪ ಬಲ್ಲವರ್ಯಾರು ಎಂಬಂತೆ ಕಳೆದೊಂದು ವಾರದಿಂದ ಸತತ ಸುರಿಯುತ್ತಿರುವ ಅಕಾಲಿಕ ಮಳೆ ರೈತರು ಬೆಳೆದಿರುವ ಫಸಲಿಗೆ ಮಾರಕವಾಗಿ ಪರಿಣಮಿಸಿರುವುದು ರೈತಾಪಿ ಸಮುದಾಯವನ್ನು ಕಂಗಾಲಾಗಿಸಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಇಂತಹ ಸಂದರ್ಭದಲ್ಲಿ ಸಂಕಷ್ಟಕ್ಕಿಡಾದ ರೈತರ ನೆರವಿಗೆ ಧಾವಿಸಿ ಇಲಾಖೆ ಅಧಿಕಾರಿಗಳು ನೆರವಿನ ಹಸ್ತ ನೀಡಲು ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.