ಗಬ್ಬೆದ್ದು ನಾರುತ್ತಿದೆ ಗಜೇಂದ್ರಗಡ
ಗಜೇಂದ್ರಗಡ: ಪಟ್ಟಣದ ಕೆನರಾ ಬ್ಯಾಂಕ್ ಬಳಿ ಚರಂಡಿ ತುಂಬಿ ರಸ್ತೆಯಲ್ಲಿ ಹರಿದು ಮುಖ್ಯ ವಾಣಿಜ್ಯ ಮಾರುಕಟ್ಟೆ ಬೀದಿ ಗಬ್ಬೆದ್ದು ನಾರುತ್ತಿದ್ದರೂ ಯಾರೂ ಕೇಳುವರಿಲ್ಲದಂತಾಗಿದೆ.
ನವನಗರದ ಮುಖ್ಯ ಚರಂಡಿಯಿಂದ ಹರಿದು ಬರುವ ಕೊಳಚೆ ನೀರು ಸಣ್ಣ ಚರಂಡಿ ತುಂಬಿ ಮಾರುಕಟ್ಟೆಯ ಭೂಮರಡ್ಡಿ ವಾಣಿಜ್ಯ ಸಂಕೀರ್ಣ ಕೆಳಗಿರುವ ಅಂಗಡಿ ಮುಂದಿನ ರಸ್ತೆಯಲ್ಲಿ ಹರಿಯುತ್ತಿದೆ. ಜನ, ವಾಹನಗಳು ಕೊಳಚೆ ನೀರು ತುಳಿದು ಸಂಚರಿಸುವ ದುಸ್ಥಿತಿ ಬಂದಿದೆ. ಚರಂಡಿ ನೀರು ರಸ್ತೆ ಮೇಲೆ ನಿಂತು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದೆ. ಇದು ವರ್ತಕರ ಆರೋಗ್ಯಕ್ಕೂ ಕುತ್ತು ಎದುರಾಗಿದ್ದರೂ ಸ್ಥಳೀಯ ಆಡಳಿತ ಮಾತ್ರ ಇದನ್ನು ಗಮನಿಸುತ್ತಿಲ್ಲ ಎಂದು ಜನ ದೂರುತ್ತಾರೆ.
ಸರ್ಕಾರ ಪಟ್ಟಣದ ಅಭಿವೃದ್ಧಿ, ಶುಚಿತ್ವ ಕಾಪಾಡಲು ಹಾಗೂ ನಾಗರಿಕರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಕೋಟ್ಯಂತರ ರು. ಹಣ ವೆಚ್ಚ ಮಾಡುತ್ತಿದೆ. ಆದರೆ, ಅಂತಹ ಯೋಜನೆಗಳ ಫಲ ವಾಸ್ತವವಾಗಿ ಜನತೆಗೆ ತಲುಪಿಲ್ಲ ಎಂಬುದಕ್ಕೆ ಈ ಚಿತ್ರಣ ಸಾಕ್ಷಿ. ರಸ್ತೆಯಲ್ಲಿ ಹರಿಯುವ ಗಲೀಜು ನೀರಿನಿಂದ ಪ್ರಮುಖ ವಾಣಿಜ್ಯ ಮಾರುಕಟ್ಟೆಯಲ್ಲಿ ಜನ ಮೂಗು ಮುಚ್ಚಿಕೊಂಡು ನಡೆದಾಡುವ ದುಸ್ಥಿತಿ ಬಂದಿದೆ. ಇಷ್ಟಾದರೂ ಪುರಸಭೆ ಆಡಳಿತ ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ ಎಂದು ಜನ ಆಪಾದಿಸುತ್ತಾರೆ.
ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇನ್ನಾದರೂ ಇಲ್ಲಿರುವ ದುರ್ನಾತ ಬೀರುವ ಮಲೀನಗೊಂಡ ನೀರು ಸುಗಮವಾಗಿ ಸಾಗಲು ಸೂಕ್ತ ಚರಂಡಿ ನಿರ್ಮಿಸಬೇಕಾಗಿದೆ. ಜನತೆಗೆ ಮೇಲಿಂದ ಮೇಲೆ ಅನಾರೋಗ್ಯದ ಭೀತಿಯೂ ಕಾಡಲಾರಂಭಿಸಿದೆ. ಅಂಗಡಿ ಮುಂದೆ ನಿಲ್ಲುವ ಕಲ್ಮಷ ನೀರಿನಿಂದ ರೋಗಾಣುಗಳು ವ್ಯಾಪಾಕವಾಗಿ ಹರಡಿ ಸಾಂಕ್ರಾಮಿಕ ರೋಗಗಳಾದ ಚಿಕುನ್‌ಗುನ್ಯಾ, ಡೆಂಘೀ ಮುಂತಾದ ಕಾಯಿಲೆಗಳು ಹರಡುವ ಸಂಭವವಿದ್ದು, ಕೂಡಲೇ ಸೂಕ್ತ ಚರಂಡಿ ಯೋಜನೆ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.