ಪ್ರಲೋಭನೆ, ಪ್ರಭಾವಕ್ಕೊಳಗಾಗದೇ ಕಾರ್ಯನಿರ್ವಹಿಸಿ
ಗದಗ: ಪ್ರಲೋಭನೆಗೆ, ಪ್ರಭಾವಕ್ಕೆ ಹಾಗೂ ಸುಪ್ರೀತಗೊಳಿಸುವ ಯಾವುದೇ ಕಾರ್ಯವಷ್ಟೇ ಅಲ್ಲ, ಅದರ ಯೋಚನೆ ಕೂಡಾ ಮಾಡದೇ ನಿಯತ್ತಿನಿಂದ ಸರಿಯಾಗಿ, ಸ್ಪಷ್ಟವಾಗಿ ಹಾಗೂ ನಿಯಮಗಳಡಿಯಲ್ಲಿ ಚುನಾವಣಾ ಕರ್ತವ್ಯ ತಪ್ಪದೇ ಪಾಲಿಸಿ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಬುಧವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಯಮ ಅನುಸರಿಸಿ: ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಸಮಯದಿಂದ ಅಧಿಕಾರಿ ಸಿಬ್ಬಂದಿ ನೇರವಾಗಿ ಚುನಾವಣಾ ಆಯೋಗದ ನಿಬಂಧನೆಗಳಿಗೆ ಒಳಪಡುತ್ತಾರೆ. ಈ ಅವಧಿಯಲ್ಲಿ ರಜೆ ಹೋಗುವುದು. ಅದಕ್ಕೆ ಮಂಜೂರಾತಿ ನೀಡುವುದು ಮಾಡಕೂಡದು. ಕೇಂದ್ರ ಸ್ಥಾನ ಬಿಡಕೂಡದು. ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಯಾವುದೇ ರಾಜಕೀಯ ಸಂಘಟನೆಗಳೊಡನೆ ನಿಕಟ ಸಂಬಂಧ ಇಟ್ಟುಕೊಳ್ಳದೇ ಚುನಾವಣಾ ತಂಡಗಳೊಡನೆ ನಿಕಟತೆ ಹಾಗೂ ಆಸಕ್ತಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿ ಜಾಗ್ರತ ತಂಡ ಇನ್ನೊಂದು ತಂಡದೊಡನೆ ಸದಾ ಸಮನ್ವಯತೆ ಹೊಂದಿ ಪ್ರತಿ ನಿಮಿಷ ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಚುನಾವಣಾ ಅಧಿಕಾರಿ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ರಾತ್ರಿ ವೇಳೆ ಮೊಬೈಲ್ ಸ್ವಿಚ್ ಆಫ್ ಮಾಡಬಾರದು. ಯಾವುದಾದರೂ ವಿಷಯಗಳ ಕುರಿತು ಖಚಿತವಾಗಿ ಗೊತ್ತಿದ್ದರೆ ಉತ್ತರಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಸಹಾಯಕ ಚುನಾವಣಾದಿಕಾರಿ ಅಥವಾ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.
ಏನಾದರೂ ಸಮಸ್ಯೆ ಅಥವಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣ ವ್ಯಾಪ್ತಿಯ ಚುನಾವಣಾ ಅಥವಾ ನೋಡೆಲ್ ಅಧಿಕಾರಿಗಳಿಗೆ ಎಸ್ಎಂಎಸ್ ಮೂಲಕ ಸಂದೇಶ ರವಾನಿಸಬೇಕು. ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಚುನಾವಣಾಧಿಕಾರಿಗಳು ಚುನಾವಣೆಯ ಮತದಾನ ಪ್ರಕ್ರಿಯೆಗಳ ಕುರಿತು ಹೆಚ್ಚಿನ ಗಮನವಿದ್ದು, ನೀತಿ ಸಂಹಿತೆ ಉಲ್ಲಂಘನೆ ಚುನಾವಣೆ ಅಕ್ರಮಗಳ ಕುರಿತು ಪ್ರತಿ ತಾಲೂಕಿಗೆ ಜಿಲ್ಲಾ ನೋಡೆಲ್ ಅಧಿಕಾರಿಗಳನ್ನು ನಿಯಮಿಸಲಾಗಿದೆ. ಅವರಿಗೆ ಜಾಗ್ರತ ತಂಡಗಳವರು ನೇರವಾಗಿ ಸಂಪರ್ಕಿಸಲು ನಿರ್ದೇಶನ ನೀಡಿದರು.
ಸಂಶಯಾಸ್ಪದ ವ್ಯವಹಾರ ಪರಿಶೀಲಿಸಿ: ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣ ಚಲಾವಣೆ ನಿರ್ಬಂಧಿಸಲು ದೊಡ್ಡ ದೊಡ್ಡ ಸಂಸ್ಥೆ, ವ್ಯಾಪಾರ ಕೇಂದ್ರ, ಕಾಂಟ್ರಾಕ್ಟರ್ಸ್, ಹೋಟೆಲ್, ಬಾರ್, ಗೃಹೋಪಯೋಗಿ ದೊಡ್ಡ ವ್ಯಾಪಾರ ಕೇಂದ್ರಗಳು, ಪ್ರಿಂಟಿಂಗ್ ಕೇಂದ್ರಗಳ, ಖಾಸಗಿ ವಾಹನ ಸಂಸ್ಥೆಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಚುನಾವಣೆಗೆ ಸಂಬಂಧಿಸಿದ ಆದರೆ ನ್ಯಾಯಯುತ ವ್ಯವಹಾರಗಳ ಹಣ ಚಲಾವಣೆ ಹೊರತುಪಡಿಸಿ ಇನ್ನುಳಿದ ಸಂಶಯಾಸ್ಪದ ವ್ಯವಹಾರಗಳ ಕುರಿತು ಪರಿಶೀಲಿಸಬೇಕು. ಚುನಾವಣೆ ಸಂಬಂಧಿಸಿದ್ದರೆ ಅದನ್ನು ಜಪ್ತಿ ಮಾಡಬೇಕು ಎಂದರು.
ಸ್ವೀಪ್ ಸಮಿತಿ ರಚನೆ: ಜಿಲ್ಲೆಯಲ್ಲಿ ಸ್ವೀಪ್ ಸಮಿತಿ ಕೈಕೊಂಡ ಕ್ರಮಗಳ ಕುರಿತು ಅದರ ಅಧ್ಯಕ್ಷ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ಅವರು ಮಾತನಾಡಿ, ಅರ್ಹರೆಲ್ಲರೂ ಮತಗಟ್ಟೆಯಲ್ಲಿ ಸೇರಬೇಕು. ಮತದಾರರ ಪಟ್ಟಿಯಲ್ಲಿರುವವರಿಗೆಲ್ಲ ತಪ್ಪದೇ ಮತ ಚಲಾಯಿಸಬೇಕು ಎನ್ನುವುದೇ ಸ್ವೀಪ್ ಕಾರ್ಯಾಚರಣೆ ಮೂಲ ಉದ್ದೇಶವಾಗಿದೆ. ಈ ಕುರಿತು ಜಿಲ್ಲಾ ಸಮಿತಿ ಅಲ್ಲದೇ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಐದೂ ತಾಲೂಕುಗಳ ಸ್ವೀಪ್ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ ತಾಲೂಕಿಗೊಂದು ಸ್ವೀಪ್ ನೋಡೆಲ್ ಅಧಿಕಾರಿಗಳನ್ನು ನಿಯಮಿಸಲಾಗಿದೆ ಎಂದರು.
ಮತದಾರರ ನೋಂದಣಿ ಹಾಗೂ ಮತದಾನ ಮಹತ್ವ ಸಾರುವ ಚುನಾವಣಾ ಆಯೋಗದಿಂದ ನೀಡಲಾದ ಸಂದೇಶಗಳ ಬ್ಯಾನರ್, ಜಿಲ್ಲಾದ್ಯಂತ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಜರುಗಿಸಲಾಗಿದೆ. ಕಲಾತಂಡಗಳ, ವಿದ್ಯಾರ್ಥಿಗಳ ಸೈಕಲ್ ಜಾಥಾ, ಪ್ರಾಥಮಿಕ ವಿದ್ಯಾರ್ಥಿಗಳ ಪ್ರಭಾತ ಫೇರಿ ಆಶಾ ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗ್ರತ ಜಾಥಾ ಮಾನವ ಸರಪಳಿ ಧ್ವನಿವರ್ಧಕಗಳ ಮೂಲಕ ಹಾಗೂ ಸ್ಥಳೀಯ ಕೇಬಲ್ ಸೇರಿದಂತೆ ಮಾಧ್ಯಮಗಳ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. ತದನಂತರ ಚುನಾವಣಾ ವೆಚ್ಚದ ನೋಡೆಲ್ ಅಧಿಕಾರಿ ಜಿಪಂ ಲೆಕ್ಕಾಧಿಕಾರಿ ರಾಮಪ್ಪ ಹಟ್ಟಿ, ಚುನಾವಣಾ ಎಸ್ಎಂ ಎಸ್ ಸಂಪರ್ಕದ ನೋಡೆಲ್ ಅಧಿಕಾರಿ ನಗರಾಭಿವೃದ್ಧಿ ಕೋಶದ ಉಪನಿರ್ದೇಶಕ ರಮೇಶ ದೇಸಾಯಿ, ಅವರು ವಿವಿಧ ಜಾಗೃತಿ ತಂಡಗಳು ಲೆಕ್ಕಪತ್ರ ಸಮಿತಿ, ಮಾಧ್ಯಮ ಪರಿಶೀಲನಾ ಸಮಿತಿಗಳ ಕಾರ್ಯಚಟುವಟಿಕೆ ಕುರಿತು ದೃಶ್ಯ, ಶ್ರವಣದ ಸೌಲಭ್ಯದ ಮೂಲಕ ಮಾಹಿತಿ ನೀಡಿದರು.
ಜಿಲ್ಲೆ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳ ಸಹಾಯಕ ಚುನಾವಣಾಧಿಕಾರಿಗಳ, ನೋಡೆಲ್ ಅಧಿಕಾರಿಗಳ ಮಾದರಿ ನೀತಿಸಂಹಿತೆ ತಂಡಗಳ, ಸಂಚಾರಿ ಜಾಗ್ರತದಳ, ವಿಡಿಯೋ ಸರ್ವವೈಲೆನ್ಸ್, ಅದನ್ನು ವೀಕ್ಷಿಸುವ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಜಾಗೃತಿ ದಳ, ಲೆಕ್ಕಪತ್ರ ತಂಡಗಳು ಎಲ್ಲ ಚುನಾವಣಾ ಅಧಿಕಾರಿಗಳು, ವಿವಿಧ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.