ಮತದಾನ ಪ್ರೇರೇಪಿಸಲು ಹಲವು ಕಾರ್ಯಕ್ರಮ
ಗದಗ: ಏಪ್ರಿಲ್ 17ರಂದು ಜರುಗಲಿರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನಕ್ಕೆ ಜನರನ್ನು ಪ್ರೇರೇಪಿಸುವ ಹಲವಾರು ಕಾರ್ಯಕ್ರಮ ಚರ್ಚಿಸಿ ಅವುಗಳನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸುವ ದಿನಾಂಕ, ಅವುಗಳನ್ನು ನಿರ್ವಹಿಸುವ ಇಲಾಖೆ ಮುಂತಾದವುಗಳ ಕುರಿತು ಗದಗ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಯಿತು.
ಗದಗ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ವೀರಣ್ಣ ತುರಮರಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮತದಾರ ನೋಂದಣಿ ಹಾಗೂ ಮತದಾನ ಮಹತ್ವ ತಿಳಿಸುವ ಕುರಿತು ಪ್ರಮುಖ ಆದೇಶ ನೀಡಿದರು.
ಮತದಾರರ ಅದರಲ್ಲೂ ವಿಶೇಷವಾಗಿ ಮಹಿಳೆ, ಯುವಜನ, ಗ್ರಾಮೀಣವ್ಯಾಪ್ತಿ, ನಗರಪ್ರದೇಶದ ಮತದಾರರು, ಸ್ಥಳೀಯ ಸಂಸ್ಥೆಗಳಲ್ಲಿ ತೋರುವ ಮತದಾನದ ಉತ್ಸಾಹ ಈ ಬಾರಿ ಲೋಕಸಭೆಯ ಚುನಾವಣೆಯಲ್ಲಿ ತೋರಿಸುವಂತೆ ಪ್ರೇರೇಪಿಸಲು ಹತ್ತು ಹಲವಾರು ಕಾರ್ಯಕ್ರಮ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ವಿವರಿಸಿದರು. ಜಿಲ್ಲೆಯಲ್ಲಿ ಪ್ರಮುಖ ನಗರ, ತಾಲೂಕು ಕೇಂದ್ರ, ಹೋಬಳಿ, ಗ್ರಾಪಂ ಮಟ್ಟದಲ್ಲಿ ಲೋಕಸಭಾ ಚುನಾವಣೆ ಮತದಾನ ನಿಮ್ಮ ಕರ್ತವ್ಯ ಮತ್ತು ಹಕ್ಕು ಅದನ್ನು ನಿರ್ಭಯವಾಗಿ ಚಲಾಯಿಸಿ ಎನ್ನುವ ಸಂದೇಶ ಬ್ಯಾನರ್ ಪ್ರದರ್ಶಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ಅಲ್ಲದೇ ಸ್ಥಳೀಯ ಸಂಸ್ಥೆಗಳು, ತಾಪಂ, ಗ್ರಾಪಂಗಳು ಅಲ್ಲದೇ ವ್ಯಾಪಾರಸ್ಥರ ಸಂಘಗಳು, ಬ್ಯಾಂಕರ್ಸ್, ರಾಜಕೀಯೇತರ ಸಂಘ ಸಂಸ್ಥೆಗಳು, ತಮ್ಮ ಪ್ರಾಯೋಜಕತ್ವ ಅದರಲ್ಲಿ ಪ್ರಕಟಿಸಿ ಬ್ಯಾನರ್‌ಗಳ ಒದಗಿಸಲು ಮನವಿ ಮಾಡಲಾಯಿತು. ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ಸ್ಥಳೀಯ ಕೇಬಲ್‌ನಲ್ಲಿ ಜಿಲ್ಲೆಯ, ಜಿಲ್ಲಾ, ತಾಲೂಕು ಹಾಗೂ ಪ್ರಮುಖ ಪ್ರದೇಶಗಳಲ್ಲಿ ಜಾನಪದಕಲಾ ತಂಡ ಉಪಯೋಗಿಸಿ, ವಿದ್ಯಾರ್ಥಿ, ವಕೀಲರು, ಸ್ವ-ಸಹಾಯ ಸಂಘಗಳ, ಸಹಕಾರದಿಂದ ಯುವ ಸರಪಳಿ, ಧ್ವನಿವರ್ಧಕಗಳ ಮೂಲಕ ವ್ಯಾಪಕ ಮತದಾನ ಜಾಗೃತಿ ಪ್ರಚಾರ ಸಂದೇಶ, ಪತ್ರಿಕಾ ಮಾಧ್ಯಮಗಳ ಮೂಲಕ ಜನಜಾಗೃತಿ, ಯುವಜನರಿಗಾಗಿ ಕಾಲೇಜುಗಳಲ್ಲಿ ಸ್ವೀಪ್ ಅಧಿಕಾರಿಗಳ ತಂಡದಿಂದ ಜಾಗೃತಿ ಕಾರ್ಯಕ್ರಮ, ಮತದಾನ ಮಾಡದೇ ಇದ್ದಲ್ಲಿ ಅದನ್ನು ದಾಖಲಿಸುವ ಹೊಸ ಅಂಶದ ಗಣಕ ಮತಯಂತ್ರ ಕುರಿತ ಸಾರ್ವಜನಿಕರಿಗೆ ವ್ಯಾಪಕ ಮಾಹಿತಿ ನೀಡಲು ಹಲವಾರು ಕಾರ್ಯಕ್ರಮಗಳ ದಿನಾಂಕಗಳನ್ನು ಸಭೆಯಲ್ಲಿ ನಿಗದಿಪಡಿಸಿ ಸಂಬಂಧಿತ ಅಧಿಕಾರಿಗಳಿಗೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಸೂಚಿಸಿದರು.
ಹೈಸ್ಕೂಲ್ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ, ಪ್ರಾಥಮಿಕ ಶಾಲಾ ಮಕ್ಕಳಿಂದ ಮತದಾನ ಜಾಗೃತಿ ಜಾಥಾ ಅಲ್ಲದೇ ಗ್ರಾಮ ಪಂಚಾಯತ್ ಕೇಂದ್ರಗಳಲ್ಲಿ ಜಾಗೃತಿ ಕುರಿತ ಪ್ರಭಾತಫೇರಿ ಆಯೋಜಿಸಲಾಗುವುದು. ತಾಲೂಕು ಮಟ್ಟದ ಸ್ವೀಪ್ ಅಧ್ಯಕ್ಷರು, ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮತದಾನ ಮಹತ್ವದ ಅರಿವು ಮತದಾರರಿಗೆ ಮೂಡಿಸುವ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತಾಲೂಕು ಹಾಗೂ ಪ್ರಮುಖ ಕೇಂದ್ರಗಳಲ್ಲಿ ಸ್ಥಳೀಯ ಮಾಧ್ಯಮ ವರದಿಗಾರರಿಗೆ ಸ್ವೀಪ್ ಕಾರ್ಯಕ್ರಮಗಳ ಕುರಿತು ಮಾಹಿತಿ ಒದಗಿಸಿ ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಾ. 16ರ ವರೆಗೆ ಜರುಗುವ ಮತದಾರ ನೋಂದಣಿ ಹಾಗೂ ನಂತರ ಏಪ್ರಿಲ್ 15ರ ವರೆಗೆ ಜರುಗುವ ಮತದಾನ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜಿಪಂ ಯೋಜನಾ ನಿರ್ದೇಶಕ ಟಿ. ದಿನೇಶ ಸ್ವಾಗತಿಸಿದರು. ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.