ಚುನಾವಣೆ ಅಕ್ರಮ ತಡೆಗೆ 5 ತಂಡ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 13
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆಯನ್ನು ತಾಲೂಕಿನಾದ್ಯಂತ ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮ ತಡೆಯಲು ವಿವಿಧ ಅಧಿಕಾರಿಗಳ ಒಟ್ಟು 5 ತಂಡಗಳನ್ನು ರಚಿಸಿ ನಿಗಾ ವಹಿಸಲಾಗುತ್ತಿದೆ ಎಂದು ಶಿರಹಟ್ಟಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ. ದಿನೇಶ ಹೇಳಿದರು.
ಅವರು ಗುರುವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಶಾಂತಿ, ಸುವ್ಯವಸ್ಥೆಯಿಂದ ಚುನಾವಣೆ ನಡೆಸಲು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಅಕ್ರಮ ನಡೆದರೆ ದೂರು ಸ್ವೀಕಾರ ಕೇಂದ್ರವನ್ನು ಮುಂಡರಗಿ ತಹಸೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಅಕ್ರಮ ಕಂಡುಬಂದರೆ ಸಾರ್ವಜನಿಕರು 08371-262235 ಕರೆ ಮಾಡಿ ದೂರು ನೀಡಬಹುದು. ಮುಂಡರಗಿ ತಾಲೂಕಿನ 7 ಗ್ರಾಪಂಗಳು ಮತ್ತು ಒಂದು ಪುರಸಭೆ ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಹಾಗೂ ಉಳಿದ 8 ಗ್ರಾಪಂಗಳು ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಮುಂಡರಗಿ ತಾಲೂಕಿನಲ್ಲಿ ಒಟ್ಟು 120 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 59 ಮತಗಟ್ಟೆಗಳು ಶಿರಹಟ್ಟಿ ಮತಕ್ಷೇತ್ರದ ವ್ಯಾಪ್ತಿಗೆ ಮತ್ತು 61 ಮತಗಟ್ಟೆಗಳು ರೋಣ ಮತಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.
ತಾಲೂಕಿನಲ್ಲಿ ಒಟ್ಟು 93,853 ಮತದಾರರಿದ್ದಾರೆ. ಅದರಲ್ಲಿ 48,196 ಪುರುಷ ಮತದಾರರು, 45,657 ಮಹಿಳಾ ಮತದಾರರಿದ್ದಾರೆ. ಚುನಾವಣಾ ಅಕ್ರಮ ತಡೆಗಟ್ಟಲು ಕೊರ್ಲಹಳ್ಳಿ ಸೇತುವೆ ಹತ್ತಿರ, ಕೊಪ್ಪಳ ರಸ್ತೆಗೆ ಹೊಂದಿಕೊಂಡು ಮತ್ತು ಹಳ್ಳಿಗುಡಿ ಹತ್ತಿರ ಒಟ್ಟು 3 ಚೆಕ್ಪೋಸ್ಟ್ಗಳನ್ನು ಪ್ರಾರಂಭಿಸಲಾಗಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ರು. 70 ಲಕ್ಷ ಖರ್ಚಿನ ಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಖರ್ಚಿನ ಲೆಕ್ಕವನ್ನು ನೀಡಬೇಕಾಗುತ್ತದೆ.
ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಸ್ವೀಪ್ ಕಮಿಟಿ ರಚಿಸಲಾಗಿದೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ ಅಧ್ಯಕ್ಷತೆ ಮತ್ತು ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಸ್. ಗೌಡರ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವರು. ಈ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದರು.
ರೋಣ ಮತಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಜಿ.ಎಸ್. ಷಡಕ್ಷರಪ್ಪ ಹಾಜರಿದ್ದು, ರೋಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಅಕ್ರಮ ದೂರುಗಳನ್ನು 08381-267006 ಕರೆ ಮಾಡಿ ಸಲ್ಲಿಸಬಹುದು ಎಂದರು. ತಹಸೀಲ್ದಾರ್ ಎಸ್.ಆರ್. ಶಿರಕೋಳ, ತಾಪಂ ಇಒ ಡಿ. ಮೋಹನ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.