ಮಕ್ಕಳ ಹಕ್ಕು ರಕ್ಷಿಸಿ: ರಡ್ಡೇರ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 13
ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗುವಂತೆ ರೂಪಿಸುವುದು ಪಾಲಕರ ಜವಾಬ್ದಾರಿ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅವರಿಗೆ ಉತ್ತಮ ಶಿಕ್ಷಣ ಕೊಡಿಸೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಈಚೆಗೆ ಪಟ್ಟಣದಲ್ಲಿ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣಾ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಕೆಜೆವಿಎಸ್‌ನ ಈ. ಬಸವರಾಜ ಮಾತನಾಡಿ, ನಾವು ಮಕ್ಕಳಿಗೆ ಆಸ್ತಿ ಮಾಡಿಡಲು ಹೆಚ್ಚು ಗಮನ ಕೊಡುತ್ತಿದ್ದೇವೆ. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಸಮುದಾಯದ ಪ್ರತಿ ಮಗುವೂ ಶಾಲೆಯಿಂದ ದೂರ ಉಳಿಯದಂತೆ ನೋಡಿಕೊಳ್ಳುವುದೂ ಸಮಾಜ ಸೇವೆಯೇ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಜೆವಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ.ಬಿ. ಹಿರೇಮಠ ಮಾತನಾಡಿ, ಸಂವಿಧಾನ ನಮಗೆ ಸಮಾನ ಅವಕಾಶಗಳನ್ನು ಕೊಟ್ಟಿದೆ. ಸರ್ವರೂ ಶಿಕ್ಷಣ ಪಡೆಯುವ ಮೂಲಕ, ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನಿಭಾಯಿಸಬೇಕಾಗಿದೆ ಎಂದರು.
ಬಿ. ಬಾಬು ಜಾಗೃತಿ ಗೀತೆಗಳನ್ನು ಹಾಡಿದರು. ಆರ್.ಬಿ. ಪೂಜಾರ, ಚಂಪಾ ಬೆಂಡಿಗೇರಿ, ಎಚ್.ಎನ್. ಹಿರೇಮಠ, ಎಚ್.ಬಿ. ವಡ್ಡಟ್ಟಿ, ಎ.ಕೆ. ಮುಲ್ಲಾನವರ, ಎ.ಸಿ. ಕೆಳಗಿನಮನಿ ಹಾಜರಿದ್ದರು. ರವಿ ದೇವರಡ್ಡಿ ನಿರೂಪಿಸಿದರು. ಎನ್.ಎಂ. ಬಡಿಗೇರ ವಂದಿಸಿದರು.