ಸ್ವೇಚ್ಛಾಚಾರದ ಬದುಕು ಮಹಿಳಾ ಸಮಾನತೆಯಲ್ಲ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 13
ಪುರುಷರಷ್ಟೇ ಸಮನಾದ ಸೌಲಭ್ಯ ಪಡೆಯುವ ಮೂಲಕ ಅರ್ಥಿಕ ಸ್ವಾವಲಂಬನೆ ಸಾಧಿಸಿ ಸ್ವೇಚ್ಛಾಚಾರದ ಬದುಕು ನಡೆಸುವುದು ಮಹಿಳಾ ಸಮಾನತೆಯಲ್ಲ. ಸಮಾಜ ಹಾಗೂ ಕೌಟುಂಬಿಕ ವ್ಯವಸ್ಥೆಯಲ್ಲಿ ಸಮನ್ವಯದಿಂದ ಅರ್ಥಪೂರ್ಣ ಬದುಕು ನಡೆಸಿದಾಗ ಮಹಿಳೆ ಸಮಾನತೆ ಪಡೆಯಲು ಸಾಧ್ಯ ಎಂದು ಶಿಶಿರ ಮಹಿಳಾ ವಿವಿದೋದ್ದೇಶಗಳ ಸಂಸ್ಥೆ ಅಧ್ಯಕ್ಷೆ ಶೀಲಾ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಕೋಟೆ ಹನುಮಂತ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರಾಗಲು ಪ್ರಸ್ತುತ ದಿನಗಳಲ್ಲಿ ಹಲವು ಅವಕಾಶಗಳಿವೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆದಾಗ ಮಹಿಳಾ ದಿನಾಚರಣೆ ಸಾರ್ಥಕಗೊಳ್ಳುತ್ತದೆ.
ಮಹಿಳೆ ಅನಾದಿ ಕಾಲದಿಂದಲೂ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾಳೆ. 12ನೇ ಶತಮಾನದಲ್ಲಿ ಶಿವಶರಣೆಯರು ವಚನ ಸಾಹಿತ್ಯ ರಚನೆಯಿಂದ ಹಿಡಿದು, ರಾಜಪ್ರಭುತ್ವ, ಸ್ವಾತಂತ್ರ್ಯ ಸಂಗ್ರಾಮ, ಪ್ರಸ್ತುತ ರಾಜಕಾರಣದಲ್ಲೂ ಛಾಪು ಮೂಡಿಸಿದ್ದಾಳೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ಉನ್ನತ ಸ್ಥಾನ ನೀಡಿದ್ದು, ಪೂಜ್ಯನೀಯ ಭಾವದಿಂದ ಕಾಣುವವರಾಗಿದ್ದಾರೆ. ಅದಕ್ಕಾಗಿ ಮಾತೃದೇವೋಭವ ಎಂದಿರುವುದು. ಆದರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಕೆಲವರು ಮಹಿಳೆ ಪಾತ್ರವನ್ನು ಅರಿಯದೇ ನಡೆದುಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸರಸ್ವತಿ ಹೊನ್ನೇಗೌಡರ ಮಾತನಾಡಿ, ಮಹಿಳೆಯರ ಮೇಲೆ ನಡೆಸುವ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ನಿಲ್ಲಬೇಕು. ಮಹಿಳೆಯರನ್ನು ಪ್ರಕೃತಿ ಹಾಗೂ ದೇವರಿಗೆ ಹೋಲಿಸುವ ದೇಶದಲ್ಲಿ 3 ನಿಮಿಷಕ್ಕೊಂದು ದೌರ್ಜನ್ಯ, 17 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿರುವುದು ಖೇದಕರ ವಿಷಯವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನತೆ ದೊರಕಿಸಿಕೊಡಬೇಕು ಎಂದರು.
ವಿಶಾಲಾಕ್ಷಿ ದೇಶಪಾಂಡೆ, ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ಪ್ರಕಾಶ ನರಗುಂದೆ, ಜಿ.ಬಿ. ಹೆಸರೂರ ಮಾತನಾಡಿದರು. ರಮಾ ಧರ್ಮಾಧಿಕಾರಿ ನಂದಾ ಕುಲಕರ್ಣಿ, ಗೌರಿ ಸಂಗಪ್ಪಶೆಟ್ಟರ್, ಅಮೃತ ಬಾತಖಂಡೆ, ಸುಜಾತಾ ಮಾಲಸೂರೆ, ಪುಷ್ಪಾ ದೈವಜ್ಞ, ಡಾ. ರಶ್ಮಿ ಪಾಟೀಲ, ರತ್ನಾ ಕಪ್ಪತ್ತನವರ, ಶಶಿಕಲಾ ಜಮಖಂಡಿ, ಪ್ರಭಾ ನರಗುಂದೆ, ಅನುರಾಧಾ ಬಾತಖಂಡೆ, ನಂದಾ ಪಲ್ಲೇದ, ಅನಸೂಯಾ ಪಲ್ಲೇದ, ಬಸಮ್ಮ ಕುಸ್ಲಾಪುರ ಇತರಿದ್ದರು. ಸುನೀತಾ ಘೋರ್ಪಡೆ, ಸುನೀತಾ ಸೊರಟೂರ, ಹೀನಾ ಕುಬುಸದ, ಮಧು ಕಪ್ಪತ್ತನವರ, ಜ್ಯೋತಿ ಸೊಪ್ಪಿನಮಠ, ರಿಹಾನ ಮಕಾನದಾರ, ತಸ್ವೀನಬಾನು ಕುಬುಸದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಸರೋಜಾ ಕಟ್ಟಿಮನಿ ಸ್ವಾಗತಿಸಿದರು. ಪಲ್ಲವಿ ನರಗುಂದ ನಿರೂಪಿಸಿದರು. ವಿಜಯಲಕ್ಷ್ಮೀ ಮಾಲಸೂರೆ ವಂದಿಸಿದರು.