ಸರ್ಕಾರದ ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ
ನರಗುಂದ: ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಜಾರಿಗೆ ತಂದ ಸರ್ಕಾರದ ಯೋಜನೆಗಳು ಶ್ರೀಮಂತರ ಪಾಲಾಗುತ್ತಿವೆ ಎಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಆರೋಪಿಸಿದರು.
ಪಟ್ಟಣದ ಜನತಾ ಕಾಲನಿಯಲ್ಲಿ ಶುಕ್ರವಾರ ತಾಲೂಕು ಕರ್ನಾಟಕ ಸಮತಾ ಸೈನಿಕ ದಳದ ಶಾಖೆ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಸರ್ಕಾರ ಪ್ರತಿ ವರ್ಷ ನೂರಾರು ಯೋಜನೆಗಳನ್ನು ಜಾರಿಗೆ ತಂದರೂ ಅವು ಶ್ರೀಮಂತರ ಪಾಲಾಗುತ್ತಿವೆ. ಇದಕ್ಕೆ ರಾಜಕೀಯ ವ್ಯಕ್ತಿಗಳು ಕಾರಣ ಎಂದು ದೂರಿದರು. ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು ಒಂದಾಗದಂತೆ ನೋಡಿಕೊಂಡು ರಾಜಕಾರಣಿಗಳು ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಪಟ್ಟಣದ ಜನತಾ ಕಾಲನಿಗೆ ರಸ್ತೆ, ಕುಡಿವ ನೀರು, ಚರಂಡಿ, ವಿದ್ಯುತ್, ಶಾಲೆ, ಮುಂತಾದ ಸೌಲಭ್ಯ ದೊರಕಿಸುವಲ್ಲಿ ಶಾಸಕರು, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪತ್ರಿವನ ಮಠದ ಸಿದ್ಧವೀರ ಶ್ರೀಗಳು ಮಾತನಾಡಿ, ತುಳಿತಕ್ಕೆ ಒಳಗಾದವರನ್ನು ಮೇಲೆತ್ತಬೇಕೆನ್ನುವ ಉದ್ದೇಶದಿಂದ ಕರ್ನಾಟಕ ಸಮತಾ ಸೈನಿಕ ದಳವನ್ನು 1926ರಲ್ಲಿ ಪ್ರಾರಂಭಸಲಾಗಿದೆ ಎಂದರು.
ಮಹಿಳಾ ರಾಜ್ಯಾಧ್ಯಕ್ಷ ಕಮಲಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ದುಂದೂರು, ಸಮೀದ ಮುಲ್ಲಾ, ರಾಜಸಾಬ್ ಕಟ್ಟಿಮನಿ, ಶಾಂತವ್ವ, ಸಾವಿತ್ರಿ ಕಟ್ಟಮನಿ, ಹನುಮಂತ ಕಟ್ಟಿಮನಿ, ಜಕೀರ ಹುಸೇನ, ಮಲ್ಲಿಕಾರ್ಜುನ ಮಡಿವಾಳರ, ತಾಲೀಮನವರ, ಅಜಾದಖಾನ್ ಲೋದಿ, ಅಶೋಕ ಶೆಳಕೆ, ಬಸವರಾಜ ಹೂಗಾರ, ಇಮಾಮಸಾಬ್ ಕೊಪ್ಪಳ ಸೇರಿದಂತೆ ಮುಂತಾದವರು ಇದ್ದರು.