ಮತದಾನ ಸಂಕಲ್ಪ ಪತ್ರ ಬಿಡುಗಡೆ
ಗದಗ: ಗ್ರಾಮ ಮಟ್ಟದಲ್ಲಿ ಅದರಲ್ಲೂ ವಿಶೇಷವಾಗಿ ಅತಿ ಕಡಿಮೆ ಮತದಾನ ಪ್ರದೇಶಗಳಲ್ಲಿನ ಮನೆಗಳಲ್ಲಿ ಇರುವ ಅರ್ಹ ಮತದಾರರಿಂದ ಈ ಬಾರಿ ಲೋಕಸಭೆಗೆ ಏ. 17ರಂದು ನಡೆವ ಮತದಾನದಂದು ತಪ್ಪದೇ ಮತ ಚಲಾಯಿಸುವ ಸಂಕಲ್ಪ ಪತ್ರ ಪಡೆಯಲು ಕ್ರಮ ಜರುಗಿಸಲಾಗುತ್ತಿದೆ ಎಂದು ಗದಗ ಜಿಲ್ಲಾ ಸ್ವೀಪ್ ಅಧ್ಯಕ್ಷ ವೀರಣ್ಣ ತುರಮರಿ ತಿಳಿಸಿದರು.
ಅವರು ಶನಿವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಕ್ಕಾಗಿ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್ ಪಿಡಿಒ ನೇತೃತ್ವದ ತಂಡ ಮನೆ ಮನೆಗೆ ಭೇಟಿ ನೀಡಲಿದೆ. ಆಶಾ, ಅಂಗನವಾಡಿ, ಪ್ರಾಥಮಿಕ, ಹೈಸ್ಕೂಲ್ ಮಕ್ಕಳ ಹಾಗೂ ಊರಿನ ಗಣ್ಯರ ಜತೆಯಲ್ಲಿ ಗ್ರಾಮ ಪಂಚಾಯತ್‌ಗಳ ಅಧಿಕಾರಿಗಳ ಮಾ. 25ರಂದು ಹಾಗೂ ಏಪ್ರಿಲ್ 10ರಂದು ಆಯಾ ಗ್ರಾಮದಲ್ಲಿ ಪ್ರಬಾತಫೇರಿ ಹೊರಡಿಸಿ ಮತದಾರರ ಜಾಗೃತಿಗೆ ಕ್ರಮ ಜರುಗಿಸಲು ತಿಳಿಸಲಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮಾ. 15ರಂದು ಸೈಕಲ್ ಜಾಥಾ ಆಗಿರುವ ಸ್ಥಳ ಬಿಟ್ಟು ಉಳಿದೆಡೆ ಮಾ.17ರಂದು ಹಾಗೂ ಮಾ. 27ರಂದು ಹೈಸ್ಕೂಲ್ ವಿದ್ಯಾರ್ಥಿಗಳ ಜಾಥಾ ಜರುಗಿಸಬೇಕು. ಶಾಲಾ ಮಕ್ಕಳ ಪ್ರಭಾತಫೇರಿಯನ್ನು ಮಾ. 17 ಹಾಗೂ 28ರಂದು ತಪ್ಪದೇ ಜರುಗಿಸಲು ತಿಳಿಸಲಾಗಿದೆ. ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು ಹಾಗೂ ಗದಗ ನಗರಸಭೆ ಆಯುಕ್ತರು ಸ್ವೀಪ್ ಕಾರ್ಯಕ್ರಮಗಳ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿರುತ್ತಾರೆ ಎಂದರು.
ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರು ವಾರ್ತಾ ಇಲಾಖೆಯ ಮಾಧ್ಯಮದವರಿಗಾಗಿ ತಯಾರಿಸಿದ ಹಾವೇರಿ ಲೋಕಸಭಾ ಕ್ಷೇತ್ರದ ಹಿನ್ನೋಟ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿ, ಜಿಲ್ಲೆಯಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ಸರ್ವರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಈಗಾಗಲೇ ಚೆಕ್ ಪೋಸ್ಟ್‌ಗಳು ತಮ್ಮ ಕಾರ್ಯ ಪ್ರಾರಂಭಿಸಿದ್ದು ಖಾಸಗಿ, ನಾಮಕರಣ, ಮೊದಲೇ ನಿಶ್ಚಯವಾದ ಮದುವೆ, ಶ್ರಾದ್ಧ ಇತ್ಯಾದಿಗಳನ್ನು ಹೊರತುಪಡಿಸಿ (ಇವುಗಳಿಗೆ ಅನುಮತಿ ಅಗತ್ಯವಿಲ್ಲ) ಭಾರಿ ಜನರ ಊಟದ ವ್ಯವಸ್ಥೆ ಜಾತ್ರೆ ಮುಂತಾದ ಧಾರ್ಮಿಕ ಆಚರಣೆ ಕಾರ್ಯಕ್ರಮಗಳು ತೀವ್ರ ನಿಗಾ ಇಡಲಾಗುತ್ತಿದೆ. ಅಬಕಾರಿ ಇಲಾಖೆ ಮದ್ಯದ ಹಾವಳಿ ತಡೆಗಟ್ಟಲು ಹೆಚ್ಚಿನ ಹಣದ ವಹಿವಾಟು ತಡೆಯಲು ಅಂತಹ ಖಾತೆಗಳ ಮೇಲೆ ನಿಗಾವಹಿಸಲು ಬ್ಯಾಂಕ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಚುನಾವಣೆ ಸಂದರ್ಭವೆಂದು ಕುಡಿವ ನೀರಿನ ಕುರಿತಂತೆ ಅಲಕ್ಷ್ಯ ಮಾಡದೇ ಅಗತ್ಯದ ಕ್ರಮಗಳನ್ನು ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕೈಕೊಳ್ಳಲು ಮತ್ತು ಆ ಕುರಿತು ನಿರಂತರ ನಿಗಾ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಾಮಗಾರಿಗಳಿಗೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ. ಗದಗ ನಗರವು ಸೇರಿದಂತೆ ಜಿಲ್ಲೆಯ ಎಲ್ಲ ನಗರ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಜರುಗಿಸಲು ವಾರಕ್ಕೊಮ್ಮೆ ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮ ಜರುಗಿಸಲು ತಿಳಿಸಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗರಾಜ, ಜಿಪಂ ಯೋಜನಾಧಿಕಾರಿ ಟಿ. ದಿನೇಶ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.