ಹೆಸ್ಕಾಂ ನಿರ್ಲಕ್ಷ್ಯ: ನಾಗರಿಕರು ಕತ್ತಲಲ್ಲಿ
ಕನ್ನಡಪ್ರಭ ವಾರ್ತೆ, ನರಗುಂದ, ಮಾ. 15
ನರಗುಂದ ತಾಲೂಕಿನಲ್ಲಿ ವಾರದಿಂದ ಕಾಣಿಸಿಕೊಂಡಿದ್ದ ಅಕಾಲಿಕ ಮಳೆ ಹಾಗೂ ರಭಸದ ಗಾಳಿಯು ಹಲವಾರು ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ತಾಲೂಕಿನಾದ್ಯಂತ ಹಲವಾರು ವಿದ್ಯುತ್ ಕಂಬಗಳು ನೆಲಕ್ಕುಳಿ ಸಾಕಷ್ಟು ನಷ್ಟ ಸಂಭವಿಸುವುದರೊಟ್ಟಿಗೆ ವಿವಿಧೆಡೆ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ಅದರಲ್ಲಿ ಪ್ರಮುಖವಾಗಿ ಭಂಡಮ್ಮನಗರದ ಜನತೆ 1 ವಾರದಿಂದ ಕತ್ತಲಲ್ಲಿಯೇ ಜೀವನ ಸಾಗಿಸಬೇಕಾಗಿದೆ.
ಪ್ರತಿ ವರ್ಷ ಈ ಭಾಗದಲ್ಲಿ ಮೇ ತಿಂಗಳ ಕೊನೆವಾರ ಅಥವಾ ಜೂನ್ ತಿಂಗಳ ಮೊದಲ ವಾರ ಮುಂಗಾರು ಮಳೆ ಪ್ರಾರಂಭವಾಗುವುದು ವಾಡಿಕೆ. ಆದರೆ, ಈ ವರ್ಷ ಮಾರ್ಚ್ ತಿಂಗಳಲ್ಲಿ ಹೋಳಿ ಹಬ್ಬದ ಮುನ್ನವೇ ಅಕಾಲಿಕೆ ಮಳೆ ಮತ್ತು ಗಾಳಿ ಬಿಸಿದ್ದರಿಂದ ರೈತ ಸಮುದಾಯ ಸೇರಿದಂತೆ ಜನತೆ ಅಪಾರ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ಹಲವಾರು ಕಡೆ ವಿದ್ಯುತ್ ತಂತಿಗಳು, ಕಂಬಗಳು ಗಾಳಿಗೆ ಬಿದ್ದು ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಕೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.
ವಾರದಿಂದ ಸಮಸ್ಯೆ: ತಾಲೂಕಿನ ಭೈರನಹಟ್ಟಿ ಪಕ್ಕದ ಭಂಡಮ್ಮನಗರದಲ್ಲಿರುವ ಟಿಸಿ ಹಾಗೂ ವಿದ್ಯುತ್ ಕಂಬವು ಗಾಳಿಗೆ ಬಿದ್ದು 1 ವಾರ ಗತಿಸಿದರೂ ದುರಸ್ತಿ ಮಾಡಿಲ್ಲ. ಹೆಸ್ಕಾಂ ಅಧಿಕಾರಿಗಳು ಪ್ರತಿದಿನ ಇದೇ ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ-ಸೋಲಾಪುರ ರಸ್ತೆಯಲ್ಲಿ ಸಂಚಾರ ಮಾಡಿ ಇದನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ. ಆದರೆ, ಇದನ್ನು ಸರಿಪಡಿಸಲು ಮಾತ್ರ ಗಮನ ನೀಡುತ್ತಿಲ್ಲ. ಇದರಿಂದಾಗಿ ಈ ನಗರದ ನಿವಾಸಿಗಳು ಗಿರಣಿಗೆ ಮತ್ತು ಮೊಬೈಲ್ ಚಾರ್ಜ್ಗೆ ನರಗುಂದ ಪಟ್ಟಣಕ್ಕೆ ಬರಬೇಕಾಗಿದೆ.
ಈ ಟಿಸಿ ಕಂಬ ಬಿದ್ದಿರುವ ಪಕ್ಕದಲ್ಲಿಯೇ ಸುಕ್ಷೇತ್ರ ಭಂಡಮ್ಮದೇವಿ ದೇವಸ್ಥಾನ ಇದೆ. ಈ ಹೆದ್ದಾರಿಯಲ್ಲಿ ಹೋಗುವ ವಾಹನದವರು ದೇವಿ ದರ್ಶನ ಪಡೆದುಕೊಂಡು ಹೋಗಬೇಕೆಂದರೆ ರಾತ್ರಿ ಸಮಯದಲ್ಲಿ ದೇವಸ್ಥಾನಕ್ಕೆ ವಿದ್ಯುತ್ ಪೂರೈಕೆ ಇಲ್ಲದ್ದರಿಂದ ದೇವಿ ಕೂಡಾ ಕತ್ತಲಲ್ಲಿಯೇ ಭಕ್ತರಿಗೆ ದರ್ಶನ ನೀಡುವಂತಾಗಿದೆ. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
30 ಮನೆಗಳಿವೆ: ನರಗುಂದ ಪಟ್ಟಣದಿಂದ 5 ಕಿ.ಮೀ. ಹಾಗೂ ಭೈರನಹಟ್ಟಿ ಗ್ರಾಮದಿಂದ 2 ಕಿ.ಮೀ. ಅಂತರದಲ್ಲಿ ಭಂಡಮ್ಮನಗರವಿದೆ. ಇಲ್ಲಿ 30 ಕುಟಂಬದವರು ತಮ್ಮ ಹೊಲದಲ್ಲಿ ಮನೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಈ ಕುಟುಂಬಗಳು ಕತ್ತಲಲ್ಲಿ ಇವೆ. ಈ ಬಗ್ಗೆ ಅಧಿಕಾರಿಗಳಿಗೆ ಟಿಸಿ ಸರಿಪಡಿಸಿ ನಮ್ಮ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂದು ನಿವಾಸಿಗಳು ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಅವರ ದೂರಾಗಿದೆ.
-ಎಸ್.ಜಿ. ತೆಗ್ಗಿನಮನಿ