ಎಲೆಕೋಸು ಬೆಳೆದು ಕೈ ಸುಟ್ಟುಕೊಂಡ ರೈತ
ಲಕ್ಷ್ಮೇಶ್ವರ: ದೇಶದ ಕೃಷಿ ಹಾಗೂ ಕೃಷಿಕರ ಸ್ಥಿತಿ ಅಯೋವುಯವಾಗುತ್ತಿರುವುದಕ್ಕೆ ಕಾರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬಂದ ಪ್ರಮುಖ ಸಂಗತಿಯೆಂದರೆ 'ರೈತರ ಬೆಳೆ ಇದ್ದಾಗ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆ ಇಲ್ಲ' ಎಂಬ ಸತ್ಯ. ಇದಕ್ಕೆ ತಾಜಾ ಉದಾಹರಣೆ ಎಂದರೆ ಎಲೆಕೋಸು ಬೆಳೆದು ನಷ್ಟ ಅನುಭವಿಸುತ್ತಿರುವ ರೈತರು ಎಂದರೆ ತಪ್ಪಾಗಲಾರದು.
ಸಮಿಪದ ಸೂರಣಗಿ ಗ್ರಾಮದ ದೇವೇಂದ್ರಪ್ಪ ಸಾಸಲವಾಡ ಎಂಬ ರೈತರು ತಮ್ಮ ಹೊಲದಲ್ಲಿ ಬೇಸಿಗೆ ಹಂಗಾಮಿನಲ್ಲಿ ಸುಮಾರು 1.5 ಎಕರೆ ಕ್ಷೇತ್ರದಲ್ಲಿ ನೀರಾವರಿ ಆಶ್ರಯದಲ್ಲಿ ಎಲೆಕೋಸು ಬೀಜಗಳನ್ನು ನಾಟಿ ಮಾಡಿ, ಕಾಲಕಾಲಕ್ಕೆ ಸರಿಯಾದ ನೀರು, ಗೊಬ್ಬರ ನೀಡಿ, ಸುಮಾರು ಹತ್ತಾರು ಸಾವಿರ ರು.ಗಳ ಔಷಧೋಪಚಾರ ಮಾಡಿದ್ದಾರೆ. ಈಗ ಸಾಕಷ್ಟು ಉತ್ತಮವಾದ ಎಲೆಕೋಸು ಬೆಳೆದು ನಾನಾ ಆಸೆಗಳನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎನ್ನುವ ಖುಷಿಯಲ್ಲಿದ್ದ ದೇವೇಂದ್ರಪ್ಪನಿಗೆ ಬೆಲೆ ಕುಸಿತವೆಂಬ ಭೂತ ಬೇತಾಳನಂತೆ ಕಾಡುತ್ತಿದೆ.
ರೈತನ ಬದುಕು ಬಿಕರಿ: ಎಲೆಕೋಸುಗಳನ್ನು ಕೊಯ್ಲು ಮಾಡಿ ಮಾರುಕಟ್ಟೆಗೆ ತಂದರೆ ಅವುಗಳನ್ನು ಕೇಳುವವರು ಇಲ್ಲವಾಗಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿನ ದಲ್ಲಾಳಿಗಳು ಬಾಯಿಗೆ ಬಂದಂತೆ ದರ ನಿಗದಿ ಮಾಡಿ ಕೇಳುತ್ತಾರೆ. ಚೀಲವೊಂದಕ್ಕೆ ರು. 50-60 ಬೆಲೆ ಕಟ್ಟುತ್ತಾರೆ. ಅಲ್ಲದೆ ಎಲೆಕೋಸುಗಳನ್ನು ಕೊಳ್ಳುವವರು ಇಲ್ಲವಾಗಿ ಲಕ್ಷಾಂತರ ರು.ಗಳ ನಷ್ಟ ಅನುಭವಿಸುವಂತಾಗಿದೆ. ಎಲೆಕೋಸುಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಾಟ ಮಾಡಿದ ಖರ್ಚು ಕೂಡಾ ದಕ್ಕದಷ್ಟು ಬೆಲೆಗೆ ರೈತನ ಮಾಲಿನ ಜತೆಯಲ್ಲಿ ರೈತನ ಬದುಕು ಕೂಡಾ ಬಿಕರಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ ಎನ್ನುತ್ತಾರೆ ರೈತ ದೇವೇಂದ್ರಪ್ಪ ಸಾಸಲವಾಡ. ಎಲೆಕೋಸು ಬೆಳೆಗೆ ಇನ್ನಿಲ್ಲದ ರೋಗಗಳ ಕಾಡಾಟ. ಬೆಳೆ ಸಂರಕ್ಷಣೆಗೆ ಸಾವಿರಾರು ರು.ಗಳ ಕೀಟನಾಶಕ ಸಿಂಪರಣೆ ಮಾಡುವಲ್ಲಿ ಸಾಕಾಗಿದೆ. ಮುಂದೆ ಉತ್ತಮ ದರ ಸಿಕ್ಕರೆ ಸ್ವಲ್ಪವಾದರೂ ಲಾಭವಾಗಬಹುದು ಎನ್ನುವ ಉದ್ದೇಶದಿಂದ ಎಲ್ಲ ಉಪಚಾರ ಮಾಡಿದರೆ, ಈಗ ಬೆಲೆ ಪಾತಾಳದತ್ತ ಮುಖ ಮಾಡಿ ರೈತರನ್ನು ಕಂಗಾಲು ಮಾಡಿದೆ ಎನ್ನುತ್ತಾರೆ ರೈತರು.
ಟೊಮೆಟೋ, ಬದನೆಕಾಯಿ ದರವೂ ಕುಸಿತ: ಅದೇ ರೀತಿಯಾಗಿ ಈ ಬಾರಿ ಟೊಮೆಟೋ ಹಣ್ಣನ್ನು ಬೆಳೆದ ರೈತರು ಕೂಡಾ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಮಾರುಕಟ್ಟೆಯಲ್ಲಿ 10 ಕೆಜಿ ಟೊಮೆಟೋ ಹಣ್ಣಿನ ಬೆಲೆ ಬುಟ್ಟಿಯೊಂದಕ್ಕೆ ಕೇವಲ ರು. 10-20 ದರದಲ್ಲಿ ಮಾರಾಟವಾಗುತ್ತಿವೆ. ಬದನೆಕಾಯಿ ರೇಟು ಕೂಡಾ ನೆಲಕಚ್ಚಿದ್ದು ಮೇಲೆಳುವ ಲಕ್ಷಣ ಕಾಣುತ್ತಿಲ್ಲ. ಇದು ಕೃಷಿಯ ಮೇಲೆ ಖಂಡಿತಾ ಕೆಟ್ಟ ಪರಿಣಾಮ ಬೀರುತ್ತದೆ.
ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮಾಂತರ ಪ್ರದೇಶದ ರೈತರು ತಾವು ಬೆಳೆದ ಬೆಳೆಯನ್ನು ಹೆಚ್ಚಿನ ಬೆಲೆ ಇರುವ ಬೇರೆ ಬೇರೆ ಪ್ರದೇಶಗಳಿಗೆ ಸಾಗಾಟ ಮಾಡಿ ಲಾಭ ಮಾಡಿಕೊಳ್ಳಬೇಕು ಎನ್ನುವ ಅರಿವು ಇಲ್ಲವಾಗಿರುವುದು ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಇರುವುದು ಹಾಗೂ ರೈತರಿಗೆ ಯಾವುದೇ ಸಲಹೆ ನೀಡದೆ ಇರುವುದು ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.
ಕೃಷಿ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಕೇವಲ ಎಸಿ ಕಾರಿನಲ್ಲಿ ಸಂಚಾರ ಮಾಡಿ ರೈತರ ಸಮಸ್ಯೆ ಹಾಗೂ ಪರಿಹಾರಗಳ ಬಗ್ಗೆ ಸಭೆ ಸಮಾರಂಭಗಳಲ್ಲಿ ತಾಸುಗಟ್ಟಲೆ ಭಾಷಣ ಬಿಗಿದು ಹೋದರೆ ರೈತರ ಸಮಸ್ಯೆಗಳು ಬಗೆಹರಿದು ಹೋಗುವುದಿಲ್ಲವೆಂಬ ಸಣ್ಣ ಅರಿವು ಇರಬೇಕು. ಆದರೆ, ಅದು ಸಾಧ್ಯವಾಗದ ಕನಸಿನ ಮಾತು.
ರೈತರು ಬೆಳೆದ ಬೆಳೆಗೆ ಯಾವಾಗ ಬೆಲೆ ಸಿಗುವುದಿಲ್ಲವೋ ಆ ವೇಳೆ ತೋಟಗಾರಿಕಾ ಬೆಳೆ, ಇತರ ಬೆಳೆಗಳನ್ನು ಸಂರಕ್ಷಿಸಿ ಶೈತ್ಯಾಗಾರದಲ್ಲಿಟ್ಟು ಬಳಿಕ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ. ಅಂದಾಗ ದೇಶದ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಧ್ಯವೆಂದು ಕೃಷಿಕ ಬಸಣ್ಣ ಬೆಂಡಿಗೇರಿಯವರ ಅಭಿಪ್ರಾಯ.
- ಅಶೋಕ ಸೊರಟೂರ