ಅನ್ಯ ದೇಶಗಳು ಬಂಡವಾಳ ಹೂಡಲು ಹೆದರುತ್ತಿವೆ
ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಯುಪಿಎ ಸರ್ಕಾರ ಕಳೆದ 10 ವರ್ಷಗಳಲ್ಲಿ ನಡೆಸಿರುವ ಅಕ್ರಮ, ಭ್ರಷ್ಟಾಚಾರಗಳಿಂದ, ಅನ್ಯ ದೇಶಿಗರು ಬಂಡವಾಳ ಹೂಡಲು ಹಿಂದೆ ಸರಿದಿದ್ದಾರೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಅವರು ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ ಭಾರತ ಗೆಲ್ಲಿಸಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ವತಂತ್ರ ಬಂದು ಅರ್ಧ ಶತಮಾನ ಕಳೆದರೂ ರಾಷ್ಟ್ರೀಯ ಶಿಕ್ಷಣ ನೀತಿ, ಕೃಷಿ ನೀತಿ ಹಾಗೂ ಉದ್ಯೋಗ ನೀತಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. 12 ಪಂಚವಾರ್ಷಿಕ ಯೋಜನೆಗಳು ಜಾರಿಯಾಗಿದ್ದರೂ ರಾಷ್ಟ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಜನಸಾಮಾನ್ಯರಿಗೆ ಸಂವಿಧಾನಬದ್ಧ ಹಕ್ಕು ದೊರೆಕಿಸುವಲ್ಲಿ ಯಶ ಸಾಧಿಸುವಲ್ಲಿ ವಿಫಲತೆ ಕಂಡುಬಂದಿದೆ. ನಮ್ಮ ದೇಶದಲ್ಲಿ 81 ಕೋಟಿಗೂ ಅಧಿಕ ಯುವಕರಿದ್ದು, ಈ ಯುವಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಾಯಕತ್ವ ಕೇವಲ ಮೋದಿಯವರಿಗೆ ಇದೆ. ಅದಕ್ಕಾಗಿಯೇ ಇಂದು ಎಲ್ಲಾ ಯುವಕರು ಮೋದಿಯ ನೇತೃತ್ವದ ಎನ್‌ಡಿಎ ಬೆಂಬಲಿಸುವ ಉತ್ಸಾಹದಲ್ಲಿದ್ದಾರೆ ಎಂದರು.
ನೀವು ಕೈಗೆ ಸಿಗದ ಎಂಪಿ ಎನ್ನುವ ಆರೋಪವಿದೆಯಲ್ಲಾ ಎನ್ನುವ ಪ್ರಶ್ನೆಗೆ, ನಾನು ಎಷ್ಟು ಸಮಯ ಸಂಸತ್ತಿನಲ್ಲಿ ಭಾಗವಹಿಸಿದ್ದೇನೆ ಎನ್ನುವ ಕುರಿತು ನೀವೇ ವರದಿ ಮಾಡಿದ್ದೀರಿ, ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 870 ಗ್ರಾಮಗಳು ಬರುತ್ತವೆ. ಪ್ರತಿ ಗ್ರಾಮಕ್ಕೆ ಭೇಟಿ ನೀಡಬೇಕಾದಲ್ಲಿ 2 ವರ್ಷದ ಕಾಲಾವಕಾಶ ಬೇಕಾಗುತ್ತದೆ. ಆದರೆ, ಸಾಧ್ಯವಾದಷ್ಟು ಸಮಯ ಗ್ರಾಮಗಳಿಗೆ ಭೇಟಿ ನೀಡಿ, ಸಾರ್ವಜನಿಕರೊಟ್ಟಿಗೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಿದ್ದೇನೆ ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಎಂ.ಎಂ. ಹಿರೇಮಠ, ಪರಶುರಾಮ ಹೆಬಸೂರ, ಶ್ರೀನಿವಾಸ ಹುಬ್ಬಳ್ಳಿ, ರಾಜು ಕುರಡಗಿ ಉಪಸ್ಥಿತರಿದ್ದರು.