ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಬೆಂಬಲಿಸಿ
ಕನ್ನಡಪ್ರಭ ವಾರ್ತೆ, ಗದಗ, ಮಾ. 18
ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮೂಲಕ ಮಹೋನ್ನತವಾದ ಭಾರತ ನಿರ್ಮಿಸಲು ಸಹಕಾರಿಯಾಗಿ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಮಂಗಳವಾರ ನಗರದ ಸ್ವಾಮಿವಿವೇಕಾನಂದ ಸಭಾಭವನದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಭಾರತ ಗೆಲ್ಲಿಸಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
21ನೇ ಶತಮಾನದಲ್ಲಿ ಸಾಗುತ್ತಿರುವ ಸಂದರ್ಭದಲ್ಲಿಯೂ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಶೋಷಣೆ ವರದಿಯಾಗುತ್ತಿವೆ. ಕಾಂಗ್ರೆಸ್ನ ಆಡಳಿತದಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಸಮಸ್ಯೆಗೆ ಕಾರಣವಾಗಿದೆ. ಕಾಂಗ್ರೆಸ್ನ ನಿಷ್ಕ್ರೀಯ ಆಡಳಿತದಿಂದಾಗಿ ಆಂತರಿಕ ಹಾಗೂ ಬಾಹ್ಯ ಭಯೋತ್ಪಾದನೆ ದೇಶವನ್ನು ವ್ಯಾಪಕವಾಗಿ ಕಾಡುತ್ತಿದೆ. ಗಡಿ ರಕ್ಷಣೆ ಕಾರ್ಯದಲ್ಲಿ ಕಾಂಗ್ರೆಸ್ನ ವೈಫಲ್ಯದಿಂದಾಗಿ ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದಂತಹ ರಾಷ್ಟ್ರಗಳು ದೇಶದ ಮೇಲೆ ನಿರಂತರವಾಗಿ ಗಡಿ ಉಲ್ಲಂಘನೆ ನಡೆಯುತ್ತಿದೆ. ಭಾರತೀಯ ಮುಂದಿನ ಪ್ರಜೆಯ ಉತ್ತಮ ಭವ್ಯ ಭವಿಷ್ಯ ನಿರ್ಮಾಣದ ಗುರಿಯೊಂದಿಗೆ ಬದಲಾವಣೆಗೆ ಮಹಿಳೆಯರು ಸನ್ನದ್ಧರಾಗಬೇಕಿದೆ. ಸುರಕ್ಷತೆ ಹಾಗೂ ದೇಶದ ಸಮಗ್ರತೆಯ ದೃಷ್ಟಿಯಿಂದ ನರೇಂದ್ರ ಮೋದಿ ಕೈ ಬಲಪಡಿಸಲು ನಾವೆಲ್ಲ ಶ್ರಮಿಸಬೇಕಿದೆ ಎಂದರು.
ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಮಹಿಳೆಯರು ಬದಲಾವಣೆ ಗಮನದಲ್ಲಿರಿಸಿಕೊಂಡು ಮತದಾನಕ್ಕೆ ಮುಂದಾಗಬೇಕಿದೆ. ಕಳೆದ ಬಾರಿ ಈ ಭಾಗದ ಜನತೆ ನೀಡಿದ ಸಹಕಾರ ಹಾಗೂ ಆಶೀರ್ವಾದದಿಂದ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿಯೂ ತಮ್ಮೆಲ್ಲರ ವಿಶ್ವಾಸ ಭರಿತ ಮತ ಚಲಾವಣೆಯಿಂದ ಮುಂಬರುವ ದಿನಗಳಲ್ಲಿ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಪಡಿಸಲು ಗಮನ ನೀಡುವುದಾಗಿ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತಿ ಜಂಬಗಿ, ಸುಶೀಲಾ ಶಿರಿ ಮಾತನಾಡಿದರು. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ಉಗಲಾಟದ ಅಧ್ಯಕ್ಷತೆ ವಹಿಸಿದ್ದರು. ರಾಧಾಬಾಯಿ ಸಫಾರೆ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಮಾಜಿ ವಿಪ ಸದಸ್ಯ ಶಿವರಾಜ ಸಜ್ಜನರ, ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಈಶಣ್ಣ ಮುನವಳ್ಳಿ, ರಾಜು ಕುರಡಗಿ, ಮೋಹನಮಾಳಶೆಟ್ಟಿ, ಎಂ.ಎಸ್. ಪಾಟೀಲ, ಎಂ.ಎಂ. ಹಿರೇಮಠ, ಶ್ರೀಕಾಂತ ಖಟವಟೆ, ಎಂ.ಎಸ್. ದೊಡ್ಡಗೌಡ್ರ, ಎಂ.ಎಸ್. ಕರಿಗೌಡ್ರ, ತೋಂಟುಸಾ ಭಾಂಡಗೆ, ಅಶ್ವಿನಿ ಜಗತಾಪ, ಶಾರದಾ ಸಜ್ಜನರ, ಮಂಜುಳಾ ಕರಿಬಸಮ್ಮನವರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಸುಕನ್ಯಾ ಸಾಲಿ ನಿರೂಪಿಸಿ, ಕಮಲಾಕ್ಷಿ ಗೊಂದಿ ಸ್ವಾಗತಿಸಿದರು.