ಜಿಲ್ಲೆಯಲ್ಲಿ 14,176 ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳು
ಕನ್ನಡಪ್ರಭ ವಾರ್ತೆ, ಗದಗ, ಮಾ. 19
ಜಿಲ್ಲೆಯಲ್ಲಿ ಮಾ. 28ರಿಂದ ಏಪ್ರಿಲ್ 9ರ ವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು 53 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ಹೇಳಿದರು.
ಅವರು ಬುಧವಾರ ನಗರದ ಜಿಪಂ ಸಭಾಂಗಣದಲ್ಲಿ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ 7,637 ವಿದ್ಯಾರ್ಥಿ ಮತ್ತು 60,539 ವಿದ್ಯಾರ್ಥಿನಿಯರು ಸೇರಿ 274 ಶಾಲೆಗಳ ಒಟ್ಟು 14,176 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪರೀಕ್ಷೆಗಳು ಸುಗಮವಾಗಿ ಹಾಗೂ ಯಾವುದೇ ಅವ್ಯವಹಾರಗಳು ನಡೆಯದಂತೆ ಮತ್ತು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ನಿಗದಿತ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿಲಾಗಿದೆ. ಇದರ ವ್ಯಾಪ್ತಿಯ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿ ಹಾಗೂ ಗುಂಪುಗಳ ಪ್ರವೇಶವನ್ನು, ಮೊಬೈಲ್ ಬಳಕೆ ನಿಷೇಧಿಸಲಾಗಿದೆ ಹಾಗೂ ಪರಿಕ್ಷಾ ಅವಧಿಯಲ್ಲಿ ಝರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಪ್ರತಿ ವಿದ್ಯಾರ್ಥಿಗೂ ಡೆಸ್ಕ್ ಕಲ್ಪಿಸಿ: ಈ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಸಿಬ್ಬಂದಿ ಹಾಗೂ ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ವ್ಯವಸ್ಥೆಗೆ ಸೂಕ್ತ ಏರ್ಪಾಡು ಮಾಡಿಕೊಳ್ಳಬೇಕು. ಪರೀಕ್ಷಾ ಅಕ್ರಮ ಇತ್ಯಾದಿ ತಡೆಗೆ ನೇಮಿಸಲಾಗುವ ಸ್ಕ್ವಾಡ್ಗಳು ಶ್ರದ್ಧೆಯಿಂದ ಕೆಲಸ ನಿರ್ವವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ನೆಲದಮೇಲೆ ಕುಳಿತುಕೊಳ್ಳದಂತೆ ಎಚ್ಚರವಹಿಸಿ, ಪ್ರತಿ ವಿದ್ಯಾರ್ಥಿಗೂ ಡೆಸ್ಕನ ವ್ಯವಸ್ಥೆ ಕಲ್ಪಿಸಲು ಕ್ರಮ ಜರುಗಿಸಲು ಸಿಇಒ ವೀರಣ್ಣ ತುರಮರಿ ನಿರ್ದೇಶನ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ ಮಾತನಾಡಿ, ಗದಗ ಶಹರದಲ್ಲಿನ 15 ಪರೀಕ್ಷಾ ಕೇಂದ್ರಗಳಲ್ಲಿ 2,770, ಗ್ರಾಮೀಣ 7 ಕೇಂದ್ರಗಳಲ್ಲಿ 1,969, ನರಗುಂದದ 6 ಕೇಂದ್ರಗಳಲ್ಲಿ 1,407, ಶಿರಹಟ್ಟಿಯ 9 ಕೇಂದ್ರಗಳಲ್ಲಿ 2,296, ರೋಣದ 11 ಕೇಂದ್ರಗಳಲ್ಲಿ 3,279, ಮುಂಡರಗಿಯ 5 ಕೇಂದ್ರಗಳಲ್ಲಿ 1,669 ವಿದ್ಯಾರ್ಥಿಗಳಲ್ಲದೇ 406 ಪುನರಾವರ್ತಿತ ಮತ್ತು 380 ಬಾಹ್ಯ ವಿದ್ಯಾರ್ಥಿಗಳು ಪರೀಕ್ಷ ಬರೆಯಲಿದ್ದಾರೆ ಎಂದರು. ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.
ಹೀಗಿದೆ ಪರೀಕ್ಷಾ ವೇಳಾಪಟ್ಟಿ
ಎಸ್ಎಸ್ಎಲ್ಸಿ ಪರೀಕ್ಷಾ ದಿನಗಳಂದು ಪ್ರತಿದಿನ ಬೆಳಗ್ಗೆ 9.30 ರಿಂದ 12.45ರ ವರೆಗೆ ಜರುಗಲಿದೆ. ಮಾ. 28ರಂದು ಪ್ರಥಮ ಭಾಷೆ, 29ರಂದು ಸಾಮಾನ್ಯ ವಿದ್ಯಾರ್ಥಿಗಳಿಗೆ ಭಾರತೀಯ ಅರ್ಥಶಾಸ್ತ್ರ, ಕಿರಿಯ ತಾಂತ್ರಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಎಲಿಮೆಂಟ್ಸ್ ಆಫ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಡ್ರಾಯಿಂಗ್ (ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ). ಏಪ್ರಿಲ್ 1ರಂದು ಗಣಿತ, ಭಾರತೀಯ ಸಮಾಜಶಾಸ್ತ್ರ, ಏ. 3ರಂದು ವಿಜ್ಞಾನ, ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ, ಕರ್ನಾಟಕ, ಹಿಂದುಸ್ಥಾನಿ ಸಂಗೀತ (ಮಧ್ಯಾಹ್ನ 2ರಿಂದ ಸಂಜೆ 5.15ರ ವರೆಗೆ). ಏ. 4ರಂದು ತೃತೀಯ ಭಾಷೆ, ಏ. 7ರಂದು ಸಮಾಜ ವಿಜ್ಞಾನ, ಏ. 9ರಂದು ರಂದು ದ್ವಿತೀಯ ಭಾಷೆಯ ಪರೀಕ್ಷೆಗಳು ಜರುಗಲಿವೆ.