ದೇಶದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಮಾ. 19
ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ದೇಶದಲ್ಲಿ ವಿವಿಧ ಅಭಿವೃದ್ಧಿ ಪರ ಕೆಲಸಗಳು ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸಬೇಕು ಎಂದು ಮುಖಂಡ ಚಂದ್ರಕಾಂತ ನೂರಶೆಟ್ಟರ್ ಹೇಳಿದರು.
ಬುಧವಾರ ಪಟ್ಟಣದ ವಿದ್ಯಾನಗರ, ಶಬ್ಬೀರ ಕಾಲನಿ, ಫಕೀರೇಶ್ವರ ನಗರ ಸೇರಿದಂತೆ ಪಪಂ ವ್ಯಾಪ್ತಿಯ 17 ವಾರ್ಡ್ಗಳಲ್ಲಿಯ ಮತದಾರರ ಮನೆ ಮನೆಗೆ ತೆರಳಿ ಮೋದಿ ಚರಿತ್ರೆ ಪುಸ್ತಕ ಮುಟ್ಟಿಸುವ ಕಾರ್ಯಕ್ರಮದ ಬಳಿಕ ಅವರು ಮಾತನಾಡಿದರು.
ಮರಳುನಾಡು ಗುಜರಾತ್ ರಾಜ್ಯದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ದಿ ಕೆಲಸಗಳನ್ನು ವೀಕ್ಷಿಸಲು ಎರಡು ಕಣ್ಣು ಸಾಲದು. ದೇಶದಲ್ಲಿಯೇ ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಗುಜರಾತನ್ನು ಗುರುತಿಸಲಾಗಿದೆ. ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿ, ದೇಶದಲ್ಲಿಯೇ ಮೋದಿ ಮಾದರಿಯಾಗಿದ್ದಾರೆ. ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಪಟ್ಟಣ ಪಂಚಾಯಿತಿ ಸದಸ್ಯ ಜಯತೀರ್ಥ ಕುಲಕರ್ಣಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಹಗರಣಗಳನ್ನು ಮಾಡಿ ಖಜಾನೆ ಲೂಟಿ ಹೊಡೆದ ಭ್ರಷ್ಟ ಪಕ್ಷವಾಗಿದ್ದು, ತಳ ಮಟ್ಟದಿಂದ ಕಿತ್ತೊಗೆಯಲು ಎಲ್ಲರೂ ಕೈಜೋಡಿಸಬೇಕು. ಕಳೆದ ಜೂನ್ನಿಂದ ಇಲ್ಲಿಯವರೆಗೆ ಪ್ರಕಟಿತವಾಗಿರುವ ಎಲ್ಲ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ತಿಳಿಸಿದ್ದು, ಅದರಂತೆ ನಾವು ಹೆಚ್ಚು ಕಾಳಜಿ ವಹಿಸಿ ದುಡಿಯಬೇಕು.
ಯುವಕರ, ಹಿರಿಯರ ಶಕ್ತಿಯಾದ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವುದೇ ನಮ್ಮೆಲ್ಲರ ಉದ್ದೇಶ. ಇಂತಹ ವಿಶೇಷ ವ್ಯಕ್ತಿತ್ವದ ಮನುಷ್ಯನನ್ನು ನಾವು ಪ್ರಧಾನಿಯನ್ನಾಗಿ ಮಾಡಿದಲ್ಲಿ ನಮ್ಮ ದೇಶ ಮಾದರಿ ದೇಶವಾಗುವುದರಲ್ಲಿ ಸಂದೇಹವಿಲ್ಲ. ಮನೆ ಮನೆಗೂ ತೆರಳಿ ಬಿಜೆಪಿಯಿಂದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕು. ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡ ವಿ.ವಿ. ಕಪ್ಪತ್ತನವರ, ರಾಮಣ್ಣ ಡಂಬಳ, ನಗರ ಘಟಕದ ಅಧ್ಯಕ್ಷ ಯಲ್ಲಪ್ಪ ಇಂಗಳಗಿ, ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದ ಅಲ್ಪಸಂಖಾತರ ಘಟಕದ ಅಧ್ಯಕ್ಷ ರಿಯಾಜ್ ಅಹ್ಮದ್ ಫಣಿಬಂಧ, ಪಪಂ ಸದಸ್ಯ ಗೂಳಪ್ಪ ಕರಿಗಾರ, ಬೀರಪ್ಪ ಸ್ವಾಮಿ, ಅನಿಲ ಮಾನೆ, ಬಸವರಾಜ ಹರ್ತಿ, ಸುರೇಶ ಹವಳದ, ಮುದಕಪ್ಪ ಬಾನಿ, ಉಮ್ಮಕ್ಕ ದೇವಗಿರಿ, ಚನ್ನವೀರಪ್ಪ ಕಲ್ಯಾಣಿ, ಬಸವಣ್ಣೆವ್ವ ಕುಂಬಾರ, ಮಹಾದೇವಿ ಅರಗಂಜಿ, ಯಲ್ಲವ್ವ ಕುಂಬಾರ, ಶಿದ್ರಾಮಯ್ಯ ಹಾವೇರಿಮಠ, ಅಕ್ಬರಸಾಬ ಯಾದಗಿರಿ ಉಪಸ್ಥಿತರಿದ್ದರು.