ಯುವಶಕ್ತಿ ಸಮರ್ಪಕ ಬಳಕೆಗೆ ಮೋದಿ ನಾಯಕತ್ವ ಸೂಕ್ತ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 19
ದೇಶದ ಯುವಶಕ್ತಿಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ನಾಯಕತ್ವ ನರೇಂದ್ರ ಮೋದಿಯಲ್ಲಿದೆ. ಆದ್ದರಿಂದ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿಯವರನ್ನು ಬೆಂಬಲಿಸಿ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹೇಳಿದರು.
ಅವರು ಬುಧವಾರ ಸ್ಥಳೀಯ ಜ. ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮುಂಡರಗಿ ತಾಲೂಕು ಬಿಜೆಪಿ ಕಾರ್ಯಕರ್ತರ ಮತ್ತು ಪದಾಧಿಕಾರಿಗಳ ಹಾವೇರಿ ಲೋಕಸಭಾ ಚುನಾವಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಐದು ವರ್ಷದ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ ಮಾತನಾಡುವ ಸಂದರ್ಭದಲ್ಲಿ ಕೇವಲ 10 ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣ ಮಾಡುವುದಾಗಿ ತಿಳಿಸಿದ್ದರು. ಆದರೆ, 1 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಪ್ರತಿವರ್ಷ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡುವ ಮೂಲಕ ಜನತೆಗೆ ನೀಡಿದ ಭರವಸೆ ಹುಸಿಗೊಳಿಸಿದರು. ದೇಶಕ್ಕೆ ಸಮರ್ಥ ನಾಯಕತ್ವದ ಅವಶ್ಯವಿದ್ದು, 60ಕ್ಕೂ ಹೆಚ್ಚು ವರ್ಷ ಕಳೆದ ನಂತರವಾದರೂ ನಮಗೆ ಪ್ರಧಾನಿ ಯಾರಾಗಬೇಕು ಎಂಬ ಗಂಭೀರ ಚಿಂತನೆ ನಡೆದಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬೇಜವಾಬ್ದಾರಿ ಆಡಳಿತವೇ ಕಾರಣ ಎಂದು ದೂರಿದರು.
ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಅನೇಕ ವರ್ಷಗಳಿಂದ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತ ಬಂದಿರುವ ಕಾಂಗ್ರೆಸ್ ಭಾರತ ನಿರ್ಮಾಣಕ್ಕಾಗಿ ಪಾದಯಾತ್ರೆ ಎನ್ನುವ ಕಾಯಕ್ರಮ ನಡೆಸುತ್ತಿರುವುದು ಹಾಸ್ಯಾಸ್ಪದ. ಹಾಗಾದರೆ ಈ ಹಿಂದೆ ಅನೇಕ ವರ್ಷಗಳ ಕಾಲ ಅಧಿಕಾರ ನಡೆಸಿದರೂ ಇವರಿಂದ ಭಾರತ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ ಎನ್ನುವುದನ್ನು ಸ್ವತಃ ಸರ್ಕಾರವೇ ತಿಳಿಸಿದಂತಾಗಿದೆ. ರಾಜ್ಯದಲ್ಲಿ 1 ವರ್ಷದ ಹಿಂದೆ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದುವರೆಗೂ ಯಾವುದೇ ಗ್ರಾಮಕ್ಕೂ ಒಂದೇ ಒಂದು ರುಪಾಯಿ ಅನುದಾನ ತಂದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿರುವ ಕೆಲಸಗಳಿಗೆ ಭೂಮಿಪೂಜೆ, ಉದ್ಘಾಟನೆ ಮಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕುಮಾರಸ್ವಾಮಿ ಹಿರೇಮಠ, ಅನೇಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಂ.ಎಸ್. ಕರಿಗೌಡ್ರ, ನಾಗರಾಜ ಕುಲಕರ್ಣಿ, ಮೋಹನ ಮಾಳಶೆಟ್ಟಿ, ಎಂ.ಎಂ. ಹಿರೇಮಠ, ರಂಗಪ್ಪ ಕ್ಯಾದಗಿಹಳ್ಳಿ, ಕಾಂತರಾಜ ಹಿರೇಮಠ, ಜಯಶ್ರೀ ಉಗಲಾಟದ, ದೇವಪ್ಪ ಕಂಬಳಿ, ಸೋಮಣ್ಣ ಚನ್ನಳ್ಳಿ, ಅಂದಪ್ಪ ಮೇಟಿ, ರಜನೀಕಾಂತ ದೇಸಾಯಿ, ಬಸವಂತಪ್ಪ ತಳವಾರ, ಬಿ.ಎ. ಹಳ್ಳಿಕೇರಿ, ಲಿಂಗನಗೌಡ ಹರ್ತಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಗಿಡ್ಡಪ್ಪ ಹಾರೋಗೇರಿ, ತಾಪಂ ಸದಸ್ಯ ಸಿದ್ದನಗೌಡ ಪಾಟೀಲ, ನಿಂಗಬಸಪ್ಪ ಪ್ಯಾಟಿ, ಪುರಸಭೆ ಸದಸ್ಯೆ ಕೊಟ್ರಮ್ಮ ಇಟಗಿ, ಸುರೇಶ ಮಾಳೆಕೊಪ್ಪ, ಶಂಕರಗೌಡ ಪಾಟೀಲ, ರೇಖಾ ದೇಸಾಯಿ, ಪರಶುರಾಮ ಕರಡಿಕೊಳ್ಳ, ಪ್ರಭು ಅಬ್ಬಿಗೇರಿ, ಎಸ್.ವಿ. ಪಾಟೀಲ, ಆರ್.ಎಂ. ತಪ್ಪಡಿ, ವೆಂಕನಗೌಡ ಪಾಟೀಲ, ಬಸವರಾಜ ಬಿಳಿಮಗ್ಗದ, ಈಶಪ್ಪ ಉಳ್ಳಾಗಡ್ಡಿ, ಸುಬಾಷ ಗುಡಿಮನಿ, ರಾಘವೇಂದ್ರ ಚಿನ್ನಿ, ವಿ.ಎಸ್. ಕಣವಿಮಠ ಮುಂತಾದವರು ಪಾಲ್ಗೊಂಡಿದ್ದರು. ದೇವಪ್ಪ ಇಟಗಿ ಸ್ವಾಗತಿಸಿದರು. ಬಸವರಾಜ ಸಸಿಮಠ ನಿರೂಪಿಸಿದರು. ಶಿವು ನಾಡಗೌಡರ ವಂದಿಸಿದರು.