ಸಂತ್ರಸ್ತನ ನೆರವಿಗೆ ಬಾರದ ಸರ್ಕಾರ
- ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮಾ. 19
ಮನೆಯ ಸುತ್ತೆಲ್ಲ ಆಕಸ್ಮಿಕ ಬೆಂಕಿ. ಮನೆಯಲ್ಲಿ ಕಟ್ಟಿದ್ದ ಆಕಳು, ಟಗರು, ಹೋರಿ, ಆಡು ಸಜೀವ ದಹನಗೊಳ್ಳುತ್ತಿರುವುದನ್ನು ನೋಡಿಯೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ...
2014ರ ಫೆ. 10ರಂದು ಬಾಲೆಹೊಸೂರು ಗ್ರಾಮದ ಹೊರವಲಯದಲ್ಲಿನ ಹೊಲದಲ್ಲಿದ್ದ ಮನೆಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ದಾಗ ನಡೆದ ಘಟನೆಯ ಚಿತ್ರಣವಿದು.
ಮಡಿಲಲ್ಲಿ ಏಳೆಂಟು ತಿಂಗಳ ಮೊಮ್ಮಗನನ್ನು ಇಟ್ಟುಕೊಂಡು ಏಳಲು ಆಗದೆ ಕುಳಿತು ಕೊಳ್ಳಲೂ ಆಗದೆ ಒದ್ದಾಡುತ್ತಿರುವಾಗ ಸಣ್ಣ ಮಗ ದೌಡಾಯಿಸಿ ಬಂದು ನನ್ನ ಜೀವ ಉಳಿಸಿರದೆ ಹೋಗಿದ್ದರೆ ಇಂದು ನಾನು ನೆನಪು ಮಾತ್ರ ಆಗುತ್ತಿದ್ದೆ ಎಂದು ವಿಷಾದದಿಂದ ನುಡಿಯುತ್ತಾರೆ ಶಿರಹಟ್ಟಿ ತಾಲೂಕಿನ ಬಾಲೆಹೊಸೂರು ಗ್ರಾಮದ ಚೌಡಪ್ಪ ಹನುಮಪ್ಪ ಸಾಂದಲಿ.
ಚೌಡಪ್ಪ 5 ಎಕರೆ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಂಡು ನೀರಾವರಿ ಮಾಡಿಕೊಂಡು ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಯಾವ ಗೊಂದಲವೂ ಬೇಡ ಎಂದು ಹೊಲದಲ್ಲಿ ಸಣ್ಣದೊಂದು ತಗಡಿನ ಶೆಡ್ ನಿರ್ಮಾಣ ಮಾಡಿಕೊಂಡು ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.
ಆದರೆ, ಈ ಸಂಸಾರದಲ್ಲಿ ವಿಧಿ ತನ್ನ ಅಟ್ಟಹಾಸ ಮೆರೆದು ಚೌಡಪ್ಪ ಬದುಕನ್ನು ನರಕವನ್ನಾಗಿಸಿದ್ದು ಮಾತ್ರ ನಿಜಕ್ಕೂ ಶೋಚನೀಯ. ಚೌಡಪ್ಪನ ಕಣ್ಣ ಮುಂದೆಯೇ ತನ್ನ ಜೀವದಂತೆ ಪ್ರೀತಿಸುತ್ತಿದ್ದ 2 ಟಗರು, 1 ತುಂಬು ಗರ್ಭಿಣಿ ಆಕಳು, 1 ಹೋರಿ, 1 ಆಡು ಹಾಗೂ ಮನೆಯಲ್ಲಿನ 3 ಚೀಲ ಅಲಸಂದಿ, 8 ಕ್ವಿಂಟಲ್ ಹತ್ತಿ, 2 ಕ್ವಿಂಟಲ್ ಮೆಣಸಿನಕಾಯಿ, 2 ತೊಲೆ ಬಂಗಾರ, ಸುಮಾರು ರು. 30 ಸಾವಿರ ನಗದು ಹಣ ನೋಡ ನೋಡುತ್ತಲೆ ಸುಟ್ಟಿದ್ದನ್ನು ನೋಡಿ ಜೀವವೇ ಬಾಯಿಗೆ ಬಂದಾಂಗ ಆಯ್ತ್ತೂರೀ, ಅಷ್ಟರಲ್ಲಿ ನನ್ನ ಮಗ ಮೌನೇಶ ಜೀವದ ಹಂಗು ತೊರೆದು ಬೆಂಕಿಯಲ್ಲಿ ಜಿಗಿದು ಬಂದು ನನ್ನ ಹಾಗೂ ನನ್ನ ಮೊಮ್ಮಗನ ಪ್ರಾಣ ಉಳಿಸಿದ ಎಂದು ಕಣ್ಣೀರು ಸುರಿಸುತ್ತಾರೆ. ಈ ಘಟನೆಯಲ್ಲಿ ಚೌಡಪ್ಪ ಅವರ ಎಡಗೈ ಹಾಗೂ ತಲೆಯ ಮುಂಭಾಗ ಸುಟ್ಟಿದೆ.
ಇಷ್ಟೆಲ್ಲಾ ಅವಘಡ ಸಂಭವಿಸಿದ ಅನಂತರ ಅಧಿಕಾರಿಗಳು ಬಂದು ಹಾನಿ ಬಗ್ಗೆ ನನ್ನಿಂದ ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಘಟನೆ ಸಂಭವಿಸಿ 2 ತಿಂಗಳಾದರೂ ಇದುವರೆಗೂ ಸರ್ಕಾರ ಪರಿಹಾರ ನೀಡದೆ ಇರುವುದು ಚೌಡಪ್ಪ ಅವರನ್ನು ಮತ್ತಷ್ಟು ಕಂಗೆಡಿಸಿದೆ. ಆಕಸ್ಮಿಕವಾಗಿ ಕುರಿಗಳು ಸತ್ತರೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಬೆಂಕಿಯ ಆಕಸ್ಮಿಕದಿಂದ ಮನೆ, ಜಾನುವಾರುಗಳು ಹಾಗೂ ತನ್ನ ಸಂಪತ್ತು ನಾಶವಾಗಿದ್ದರೂ ಸರ್ಕಾರದಿಂದ ಬಿಡಿಗಾಸು ಕೂಡಾ ಸಿಕ್ಕಿಲ್ಲ.