ಅತಿಕ್ರಮಣದಿಂದ ಅರ್ಧಕ್ಕೆ ನಿಂತ ಕಾಮಗಾರಿ
ಕನ್ನಡಪ್ರಭ ವಾರ್ತೆ, ರೋಣ, ಮಾ. 20
ಖಾಸಗಿ ವ್ಯಕ್ತಿಗಳೀರ್ವರ ಪರಸ್ಪರ ಜಗಳದಲ್ಲಿ ಪಟ್ಟಣದ ರುದ್ರಭೂಮಿಗೆ ಹೋಗುವ ಜಿಗಳೂರು ಒಳರಸ್ತೆಯ ಅಭಿವೃದ್ಧಿ ಕಾಮಗಾರಿಯು 3 ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ಇದರಿಂದ ರುದ್ರಭೂಮಿಗೆ ಮತ್ತು ಜಿಗಳೂರು ಗ್ರಾಮಕ್ಕೆ ಹೋಗಲು ತೊಂದರೆಯಾಗುತ್ತಿದೆ. ಕೂಡಲೇ ಕಾಮಗಾರಿ ಆರಂಭಿಸಲು ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಪರವಾಗಿ ವೀರೇಶ ದೊಡ್ಡಣ್ಣವರ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದರು.
ಗುರುವಾರ ಪಟ್ಟಣದ ತಾಪಂ ಸಭಾಭವನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿ ರವಿ ಪುರಷೋತ್ತಮ ಅವರಲ್ಲಿ ದೂರು ಸಲ್ಲಿಸಿ ಒತ್ತಾಯಿಸಿದರು. ರುದ್ರಭೂಮಿಗೆ ಹೋಗುವ ರಸ್ತೆಯು ಮೊದಲೇ ಇಕ್ಕಟ್ಟಾಗಿದ್ದು, ಖಾಸಗಿ ವ್ಯಕ್ತಿಗಳು ಪರಸ್ಪರ ಅತಿಕ್ರಮಣ ಮಾಡಿಕೊಂಡಿದ್ದರಿಂದ ಮತ್ತಷ್ಟು ಇಕ್ಕಟ್ಟಾಗಿದೆ. ಹಾಗೂ ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಗಲೀಜು ನೀರು ತುಂಬಿಕೊಂಡಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಜನತೆ ಭಯಪಡುತ್ತಿದ್ದಾರೆ. ಈ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗಲು ತೀವ್ರ ತೊಂದರೆ ಪಡುವಂತಾಗಿದೆ. ಈ ಕುರಿತು ಇಲ್ಲಿನ ನಿವಾಸಿಗಳು ಅನೇಕ ಬಾರಿ ಲಿಖಿತ ಮತ್ತು ಮೌಖಿಕವಾಗಿ ಪುರಸಭೆ ಅಧಿಕಾರಿ ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ರೀತಿ ವಿಳಂಬ ಮಾಡುತ್ತಿರುವುದನ್ನು ಕಂಡಲ್ಲಿ ಜನತೆಯಲ್ಲಿ ನಾನಾ ರೀತಿಯ ಸಂಶಯಕ್ಕೆ ಎಡೆಮಾಡಿದೆ. ಕೂಡಲೇ ಅರ್ಧಕ್ಕೆ ನಿಂತ ಕಾಮಗಾರಿ ಪ್ರಾರಂಭಿಸುವಲ್ಲಿ ಇಲಾಖೆ ಕ್ರಮಜರುಗಿಸಬೇಕು ಎಂದು ಆಗ್ರಹಿಸಿದರು.
ಧೂಳು: ಸಾರ್ವಜನಿಕರ ಪರವಾಗಿ ಪಟ್ಟಣದ ಸುರೇಶ ಸಜ್ಜನರ ಮನವಿ ಸಲ್ಲಿಸಿ, ಪಟ್ಟಣದಲ್ಲಿನ ಪಾಲಾ ಬದಾಮಿ ಮತ್ತು ಹುಬ್ಬಳ್ಳಿ ಹೈದರಾಬಾದ್ ರಾಜ್ಯ ಹೆದ್ದಾರಿಯ ಮೇಲೆ ಸಂಪೂರ್ಣ ಉಸುಕು ಮತ್ತು ಮಣ್ಣುನಿಂದ ಕೂಡಿದ್ದು, ವಾಹನಗಳು ಸಂಚರಿಸಿದ್ದಲ್ಲಿ ದಟ್ಟಣೆಯ ಧೂಳು ಇಡೀ ರಸ್ತೆಯನ್ನೆ ಆವರಿಸುತ್ತದೆ. ಇದರಿಂದ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಇಲ್ಲಿ ನಿತ್ಯ ಸಂಚರಿಸುವ ನೂರಾರು ಮಹಿಳೆಯರಿಗೆ, ಶಾಲಾ ಮಕ್ಕಳಿಗೆ, ವೃದ್ಧರಿಗೆ, ಗರ್ಭಿಣಿಯರು ತೀವ್ರ ತೊಂದರೆ ಪಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ರಸ್ತೆಯ ಮೇಲೆ ತುಂಬಿರುವ ಧೂಳನ್ನು ಸ್ವಚ್ಛಗೊಳಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ವರದಿ ಸಲ್ಲಿಸಿ: ಈ ಕುರಿತು ಲೋಕಾಯುಕ್ತ ಇನ್ಸ್ಪೆಕ್ಟರ್ ರವಿ ಪುರುಷೋತ್ತಮ ಅವರು ಪುರಸಭೆಯ ಮುಖ್ಯಾಧಿಕಾರಿ ಪರವಾಗಿ ಯೋಜನಾ ಅಧಿಕಾರಿ ಎಸ್.ವೈ. ಸಂಕನಗೌಡ್ರ ಅವರನ್ನು ಕರೆಸಿ, ಜಿಗಳೂರು ರಸ್ತೆಯಲ್ಲಿರುವ ಗುಲಗಂಜಿ ಮಠದ ರುದ್ರಭೂಮಿಗೆ ಹೋಗುವ ರಸ್ತೆಯು ಅರ್ಧಕ್ಕೆ ನಿಂತದ್ದನ್ನು ಕೂಡಲೇ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳಬೇಕು. ಪಟ್ಟಣದಲ್ಲಿನ ಮುಖ್ಯ ರಸ್ತೆಗಳ ಮೇಲೆ ತುಂಬಿಕೊಂಡಿರುವ ಉಸುಕು ಮತ್ತು ಮಣ್ಣನ್ನು ವಾರದೊಳಗೆ ತೆಗೆದು ಸ್ವಚ್ಛಗೊಳಿಸಬೇಕು. ಈ ಕುರಿತು ವಿಳಂಬ ಮಾಡದೇ ನಮಗೆ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು. 10 ವರ್ಷಗಳಿಂದ ಸೂಡಿ ಗ್ರಾಮದ 2ನೇ ವಾರ್ಡಿನಲ್ಲಿರುವ ಸಮುದಾಯ ಭವನದಲ್ಲಿ ಹಾಲಿನ ಕೇಂದ್ರಕ್ಕೆ ಗ್ರಾಪಂನವರು ಪರವಾನಗಿ ಕೊಟ್ಟಿದ್ದಾರೆ. ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮ ಜರುಗುವಲ್ಲಿ ಸಮುದಾಯ ಭವನ ಅನೂಕೂಲವಾಗದೇ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ಖೇದಕರ ಸಂಗತಿ. ಈ ಕುರಿತು ಅನೇಕ ಬಾರಿ ಗ್ರಾಪಂ ಮತ್ತು ತಾಪಂಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸೂಡಿ ಗ್ರಾಮದ ಎಂ.ಕೆ. ಬಾದವಾಡಗಿ ಮನವಿ ಸಲ್ಲಿಸಿದರು.
ಆಗ ಸ್ಥಳದಲ್ಲಿಯೇ ಇದ್ದ ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, ಈ ಕುರಿತು ಈಗಾಗಲೇ ಸಮುದಾಯ ಭವನದಲ್ಲಿನ ಹಾಲಿನ ಕೇಂದ್ರ ತೆರವುಗೊಳಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಸದ್ಯ ಲೋಕಸಭೆಯ ಚುನಾವಣೆಯ ನೀತಿ ಸಂಹಿತೆ ಇರುವುದರಿಂದ ಗ್ರಾಪಂ ಆಡಳಿತ ಮಂಡಳಿ ಸಭೆ ನಡೆಯಲು ಬರುವುದಿಲ್ಲ. ಚುನಾವಣೆ ಬಳಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ಸಿಬ್ಬಂದಿ ಎಂ.ಎಂ. ಅಯ್ಯನಗೌಡ್ರ, ವಿ.ಬಿ. ಅರಿಷನದ ಉಪಸ್ಥಿತರಿದ್ದರು.