ಮತದಾನ ರಾಷ್ಟ್ರ ಕಟ್ಟುವ ಪವಿತ್ರ ಕಾರ್ಯ: ಹಳ್ಳೂರ
ಕನ್ನಡಪ್ರಭ ವಾರ್ತೆ, ಗದಗ, ಮಾ. 20
ನಮ್ಮ ಸಂವಿಧಾನ ನಮಗೆ ನೀಡಿರುವ ಸವಲತ್ತುಗಳಲ್ಲಿ ಮತದಾನವೂ ಕೂಡ ಒಂದಾಗಿದ್ದು, 18 ವರ್ಷ ತುಂಬಿದ ಪ್ರತಿ ವ್ಯಕ್ತಿಯೂ ತನ್ನ ಮತವನ್ನು ತಪ್ಪದೇ ಚಲಾಯಿಸುವ ಮುಖಾಂತರ ರಾಷ್ಟ್ರ ಕಟ್ಟುವ ಪವಿತ್ರ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬೇಕಿರುವುದು ಅಗತ್ಯವಾಗಿದೆ ಎಂದು ಚಿಕೇನಕೊಪ್ಪದ ಚನ್ನವೀರ ಶರಣರ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಆರ್. ಹಳ್ಳೂರ ಹೇಳಿದರು.
ಅವರು ಈಚೆಗೆ ತಾಲೂಕಿನ ಬಳಗಾನೂರು ಗ್ರಾಮದ ಚಿಕೇನಕೊಪ್ಪದ ಚನ್ನವೀರ ಶರಣರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಪ್ರಭಾತಫೇರಿ ಉದ್ಘಾಟಿಸಿ ಮಾತನಾಡಿದರು.
ಮತದಾನದ ಕುರಿತು ಜನರಲ್ಲಿ ಜಾಗೃತಿಗಾಗಿ ನಡೆಸಿದ ಪ್ರಭಾತಫೇರಿಯಲ್ಲಿ ಶಾಲೆಯ ಮಕ್ಕಳು ಮತದಾನ ಪವಿತ್ರವಾದುದು, ಪ್ರತಿಯೊಬ್ಬರೂ ಮತದಾನ ಮಾಡಬೇಕು, ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಅಧಿಕಾರ ಅದಕ್ಕಾಗಿ ಪ್ರತಿಯೊಬ್ಬರ ಮತದಾನ ದೇಶಕ್ಕೆ ಭದ್ರತೆ ಒದಗಿಸುತ್ತದೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವುದರ ಮೂಲಕ ದೇಶ ನಿರ್ಮಾಣದಲ್ಲಿ ಭಾಗವಹಿಸಬೇಕು ಎಂಬ ಸಂದೇಶ ಸಾರುವ ಹಾಗೂ ಮತದಾನದ ಜಾಗೃತಿ ಮೂಡಿಸುವ ವಿವಿಧ ಘೋಷಣೆಗಳನ್ನು ಕೂಗುತ್ತಾ ಶಾಲೆಯ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರಭಾತಫೇರಿ ನಡೆಸಿದರು. ಪ್ರಧಾನ ಗುರುಮಾತೆ ಆರ್.ಎನ್. ಮಲ್ಲಾಪುರ, ಡಿಇಡಿ ಪ್ರಾಂಶುಪಾಲ ಎಸ್.ಎಂ. ಮರಿಗೌಡರ ಹಾಗೂ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.