ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹತ್ತಿ ಬೆಳೆಗಾರರಿಗೆ ಕಂಪನಿ ಸೂಕ್ತ ಪರಿಹಾರ ನೀಡಲಿ

Lingaraj Badiger
Updated On : 21 Mar 2014, 11:59 am

ಕನ್ನಡಪ್ರಭ ವಾರ್ತೆ, ನರಗುಂದ, ಮಾ. 20
2013-14ನೇ ಸಾಲಿನಲ್ಲಿ ತಾಲೂಕಿನ ರೈತರು ಮಹಿಕೊ ಕಂಪನಿಯ ಕನಕ ಬೀಜ ಬಿತ್ತನೆ ಮಾಡಿ ರೈತರು ನಷ್ಟ ಹೊಂದಿದ್ದು, ಅತಿ ಶೀಘ್ರದಲ್ಲಿ ಕಂಪನಿ ಸೂಕ್ತ ಪರಿಹಾರ ನೀಡಬೇಕು ಎಂದು ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಲಪ್ರಭಾ ಜಲಾಶಯ ಕಾಲುವೆ ಹಾಗೂ ಮಲಪ್ರಭಾ ನದಿ ವ್ಯಾಪ್ತಿಯ ಈ ಭಾಗದ ರೈತರು ತಮ್ಮ ನೀರಾವರಿ ಜಮೀನುಗಳಲ್ಲಿ ಮಹಿಕೊ ಕಂಪನಿಯ ಕನಕ ಬಿ.ಟಿ. ಹತ್ತಿ ಬೀಜವನ್ನು ಬಿತ್ತನೆ ಮಾಡಿ ಅಪಾರ ನಷ್ಟ ಅನುಭವಿಸಿದ್ದಾರೆ. ರೈತರಿಗೆ ಇಂತಹ ನಕಲಿ ಬೀಜ ಮಾರಾಟ ಮಾಡಿದ ಕಂಪನಿಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ ತೋರಿಸುತ್ತಿದೆ. ತಾಲೂಕಿನ ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಈ ಬೀಜ ಬಿತ್ತನೆ ಮಾಡಿ ನಷ್ಟ ಹೊಂದಿದ್ದಾರೆ ಎಂದರು. ಈ ಕುರಿತು ತಾಲೂಕಿನ ರೈತರು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಂದು ಈ ಬೆಳೆ ಸಮೀಕ್ಷೆ ಮಾಡಿಕೊಂಡು ಹೋಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ ರೈತರಿಗೆ ರು. 20ರಿಂದ 25 ಸಾವಿರ ಪರಿಹಾರ ನೀಡಲು ಸರ್ಕಾರವೇಕೆ ಮುಂದಾಗುತ್ತಿಲ್ಲ? ಎಂದರು.
ಸರ್ಕಾರ ಈ ಕೂಡಲೇ ನಷ್ಟ ಹೊಂದಿದ ಹತ್ತಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡದಿದ್ದರೆ ಕಂಪನಿ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಬಸವನಗೌಡ ಚಿಕ್ಕನಗೌಡ್ರ, ಅಣ್ಣಪ್ಪಗೌಡ ಪಾಟೀಲ, ಚಳಪ್ಪ ನಾಯ್ಕರ, ಅಲ್ಲಿಸಾಬ್ ನದಾಫ್, ರುದ್ರಪ್ಪ ಗಾಣಿಗೇರ, ಬಸಪ್ಪ ಗುಡೇದರಿ, ಗುರುಶಾಂತ ನರಸಾಪುರ, ಎಂ.ಟಿ.ಬದಾಮಿ ಉಪಸ್ಥಿತರಿದ್ದರು.
--
ಲಕ್ಷ್ಮೇಶ್ವರದಲ್ಲಿ ಹೋಳಿ ಆಚರಣೆ
ಲಕ್ಷ್ಮೇಶ್ವರ: ಹೋಳಿ ಹಬ್ಬದ ರಂಗಪಂಚಮಿಯನ್ನು ಪಟ್ಟಣದಲ್ಲಿ ಜನತೆ ಪರಸ್ಪರ ರಂಗು ರಂಗಿನ ಬಣ್ಣ ಎರಚುತ್ತಾ ಸೌಹಾರ್ದಯುತವಾಗಿ, ಶಾಂತಿಯುತವಾಗಿ ಗುರುವಾರ ಆಚರಿಸಿದರು. ಪಟ್ಟಣದ ಬಸ್ತಿಬಣ, ಪೇಠಬಣ, ದೇಸಾಯಿಬಣ, ಹಳ್ಳದಕೇರಿ ಓಣಿ, ಕೆಂಚಲಾಪುರ ಓಣಿ, ಕದರಗೇರಿ ಓಣಿ, ಇಂದಿರಾನಗರ, ವಿನಾಯಕನಗರ ಮುಂತಾದ ಕಡೆಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದ ರತಿ-ಕಾಮಣ್ಣರ ಮೂರ್ತಿಗಳನ್ನು ಪಟ್ಟಣದಲ್ಲಿ ಮೆರವಣಿಗೆ ಮಾಡುತ್ತ ಯುವಕರ ಗುಂಪು ಪರಸ್ಪರ ರಂಗು ರಂಗಿನ ಬಣ್ಣ ಎರಚುತ್ತ ಹೋಳಿ ಹಬ್ಬ ಆಚರಿಸಿದರು. ಹಳ್ಳದ ಕೇರಿ ಓಣಿಯ ರತಿ-ಕಾಮಣ್ಣರ ಮೂರ್ತಿಯನ್ನು ಕಮಲದ ಹೂವಿನ ಚಿತ್ತಾರದ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು. ಯುವಕರು ಹಾಗೂ ಚಿಕ್ಕ ಮಕ್ಕಳು ವಾದ್ಯಗಳನ್ನು ಬಾರಿಸುತ್ತ ವಿವಿಧ ವಿನೋದಗಳನ್ನು ಮಾಡುತ್ತ ಮಧ್ಯಾಹ್ನ 2ರ ವರೆಗೆ ಬಣ್ಣದ ಹಬ್ಬ ಆಚರಿಸಿದರು. ನಂತರ ರತಿ-ಕಾಮಣ್ಣರ ಮೂರ್ತಿಗಳನ್ನು ಸುಟ್ಟು ಹೋಳಿ ಹಬ್ಬವನ್ನು ಮುಕ್ತಾಯಗೊಳಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಎಂದು ಪಟ್ಟಣದ ಪಿಎಸ್‌ಐ ವಿಕಾಸ್ ಪಿ.ಎಲ್. ತಿಳಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement