ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿ ಅಭ್ಯರ್ಥಿ ಪರ ಇಂದು ಬಿಎಸ್‌ವೈ ಪ್ರಚಾರ

Vishwanath S
Updated On : 30 Mar 2014, 12:43 pm

ಹಾವೇರಿ: ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಪ್ರಚಾರ ಕೈಗೊಳ್ಳಲು ಭಾನುವಾರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಹಾವೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಮಾ.30ರ ಬೆಳಗ್ಗೆ 10 ಗಂಟೆಗೆ ಹಾಗೂ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಅಧ್ಯಕ್ಷ ಭೋಜರಾಜ ಕರೂದಿ, ಮಾಜಿ ಸಚಿವ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ನೆಹರು ಓಲೇಕಾರ, ಶಿವರಾಜ ಸಜ್ಜನರ, ಕೆಎಂಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗೇಂದ್ರ ಕಟಕೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜ ಕಲಕೊಟಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ. ಮಲ್ಲೇಶಪ್ಪ ಹರಿಜನ ಮತ್ತು ಗುಡ್ಡನಗೌಡ ಅಂದಾನಿಗೌಡ್ರ ತಿಳಿಸಿದ್ದಾರೆ.

ಗದಗಿನ 34ನೇ ವಾರ್ಡ್‌ನ ಅಭಿವೃದ್ಧಿಗೆ ಆಗ್ರಹಿಸಿ ಮನವಿ
ಗದಗ: ನಗರದ ಕಳಸಾಪುರ ರಸ್ತೆಯ 34ನೇ ವಾರ್ಡ್‌ನಲ್ಲಿ ನಗರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ವಾರ್ಡ್‌ನ ಜನತೆ ನಾಗರಿಕ ಸೌಲಭ್ಯದಿಂದ ವಂಚಿತರಾಗಿದ್ದು, ತೀರಾ ಹಿಂದುಳಿದ ಪ್ರದೇಶವಾಗಿದೆ. ಕೂಡಲೇ 34ನೇ ವಾರ್ಡ್‌ಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ನಂದೀಶ್ವರ ನಗರಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶುಕ್ರವಾರ ನಗರಸಭೆ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ, ಉಪಾಧ್ಯಕ್ಷ ಕೃಷ್ಣಾ ಪರಾಪುರಗೆ ಮನವಿ ಸಲ್ಲಿಸಿದರು. ಒಳಚರಂಡಿ ವ್ಯವಸ್ಥೆ, ಒಳ ರಸ್ತೆಗಳ ಡಾಂಬರೀಕರಣ, ಉದ್ಯಾನಗಳ ಅಭಿವೃದ್ಧಿ, ಕಸ ವಿಲೇವಾರಿಗೆ ಪ್ರತಿ ಕ್ರಾಸ್‌ಗೆ ಒಂದರಂತೆ ಡಸ್ಟ್‌ಬಿನ್ ಟ್ಯಾಂಕರ್‌ನ್ನು ಇರಿಸಬೇಕು. ಚರಂಡಿ ದುರಸ್ತಿ, ಬೀದಿ ದೀಪಗಳ ವ್ಯವಸ್ಥೆ ಸರಿಪಡಿಸಬೇಕು. ವಾರಕ್ಕೊಮ್ಮೆ ಚರಂಡಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಅಂಧ ಮಕ್ಕಳಿಗೆ ಬ್ರೈಲ್ ಸ್ಲೇಟ್ ವಿತರಣೆ
ಗದಗ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಈಚೆಗೆ ಪಂ. ಪಂಚಾಕ್ಷರ ಗವಾಯಿಗಳವರ ಸಂಗೀತ ಶಾಲೆಯ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಸ್ಲೇಟ್ ವಿತರಣಾ ಸಮಾರಂಭವನ್ನು ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಮಾತನಾಡಿದರು. ಜೆ.ಟಿ. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿ.ಐ. ಕುರಗೋಡ, ಪ್ರಾ.ಎಸ್.ಎಸ್. ಯಂಕಂಜಿ, ಪ್ರಾ. ಎಂ.ಎಂ. ನರಗುಂದ ರಾಜ್ಯ ಯುವ ರೆಡ್‌ಕ್ರಾಸ್ ರಾಜ್ಯ ಸಮಿತಿ ಸದಸ್ಯ ಎಚ್.ಎಸ್. ಕೌಲಗಿ ಮಾತನಾಡಿದರು. ಬಸವರಾಜ ಹಿಡ್ಕಿಮಠ, ಪ್ರಾಚಾರ್ಯ ಬಿ.ಜಿ. ಹಿರೇಮಠ ಇದ್ದರು.

ಬದುಕಿಗೆ ಇಂಗ್ಲಿಷ್ ಜ್ಞಾನ ಅವಶ್ಯ: ಚೌಹಾಣ
ಗದಗ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಜಗತ್ತಿನ ಭಾಷೆಯಾದ ಇಂಗ್ಲಿಷ್ ಜ್ಞಾನ ಅವಶ್ಯಕ ಎಂದು ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಟ್ರಸ್ಟ್‌ನ ರವಿ ಚೌಹಾಣ ಹೇಳಿದರು. ಸ್ಥಳೀಯ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಸಂವಹನ ಕೌಶಲ್ಯಗಳು ಮತ್ತು ವೃತ್ತಿ ಮಾರ್ಗದರ್ಶನ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಜಗದೀಶ ಹಂಚಿನಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜೆ.ಎ. ಪಾಟೀಲ, ಸಂಚಾಲಕ ಎಸ್.ಎಸ್. ಸಂಗೊಳ್ಳಿ ಮಾತನಾಡಿದರು. ಪ್ರೇಮಾ ಗುಡಗೇರಿ ಪ್ರಾರ್ಥಿಸಿದರು. ಪಿ.ಎನ್. ಮುನವಳ್ಳಿ ಪರಿಚಯಿಸಿದರು. ನಾಗಶ್ರೀ ಪೂಜಾರಿ ನಿರೂಪಿಸಿದರು. ನಸೀಮಾ ರೋಣದ ವಂದಿಸಿದರು.

ರಂಗಭೂಮಿ ಕಲೆಯ ತವರೂರು ಗದಗ: ಕುರಿ
ಗದಗ: ಗದಗ ಜಿಲ್ಲೆಯು ರಂಗಭೂಮಿಯ ತವರೂರು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಹೇಳಿದರು. ಅವರು ಈಚೆಗೆ ಸ್ಥಳೀಯ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ ಹಾಗೂ ಪಂಚವಟಿ ಪ್ರತಿಷ್ಠಾನ ಸಹಯೋಗದಲ್ಲಿ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹನುಮಂತ ಹಾಲಗೇರಿ ವಿರಚಿತ ವಿಡಂಬನಾತ್ಮಕ ನಾಟಕ 'ಊರು ಸುಟ್ಟರೂ ಹನುಮಪ್ಪ ಹೊರಗ' ನಾಟಕ ಉದ್ಘಾಟಿಸಿ ಮಾತನಾಡಿದರು. ನಾಟಕಗಳಲ್ಲಿ ವಿಡಂಬನೆ ಹಾಸ್ಯ ಹಾಗೂ ಸಂಸಾರಿಕ ಕಥೆಗಳನ್ನು ಮತ್ತು ವಾಸ್ತವಿಕತೆ ಮೈಗೂಡಿಸಿಕೊಂಡಿರಬೇಕು ಎಂದರು. ಪ್ರಾ.ಕೆ.ಎಚ್. ಬೇಲೂರ ಹಾಗೂ ಗಂಗಣ್ಣ ಕೋಟಿ ಪ್ರಾಸ್ತಾವಿಕ ಮಾತನಾಡಿದರು. ಪಂಚವಟಿ ಪ್ರತಿಷ್ಠಾನದ ಸದಸ್ಯ ಮರುಳಸಿದ್ಧಪ್ಪ ದೊಡ್ಡಮನಿ, ರುದ್ರಣ್ಣ ಗುಳಗುಳಿ, ಬಡಿಗಣ್ಣವರ ಇದ್ದರು. ಶ್ವೇತಾ ನಿರೂಪಿಸಿದರು. ರೇವಣಸಿದ್ದಪ್ಪ ವಂದಿಸಿದರು.

ಆಟೋ ಚಾಲಕರಿಂದ ಮತದಾರರ ಜಾಗೃತಿ
ಕಾರವಾರ: ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವಂತೆ ಸಾರುವ ಸಂದೇಶಗಳನ್ನು ಒಳಗೊಂಡ ಸ್ಟಿಕ್ಕರಗಳನ್ನು ತಮ್ಮ ಆಟೋ ಹಾಗೂ ಟೆಂಪೋಗಳಿಗೆ ಅಳವಡಿಸುವ ಮೂಲಕ ಕಾರವಾರದ ಖಾಸಗಿ ವಾಹನ ಚಾಲಕರು ಮತದಾನ ಜಾಗೃತಿ ಅಭಿಯಾನದಲ್ಲಿ ಶನಿವಾರ ಕೈಜೋಡಿಸಿದರು. ಖಾಸಗಿ ವಾಹನಗಳಿಗೆ ಮತದಾನ ಜಾಗೃತಿ ಸ್ಟಿಕ್ಕರ್‌ಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಟಿ. ರೇಜು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುನಾಲ್ಕರ್ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ರಮೇಶ್,  ಎನ್.ಜಿ. ಹಿತ್ತಲಮಕ್ಕಿ ಮತ್ತಿತರರಿದ್ದರು.

ನಿಯಮ ಉಲ್ಲಂಘನೆ: ಬಾರ್ ಮೇಲೆ ಡಿಸಿ ದಾಳಿ
ಗದಗ: ಜಿಲ್ಲೆಯ ರೋಣದ ಬಸ್ ನಿಲ್ದಾಣದ ಬಳಿಯ ಸೋಸಿಯಲ್ ಕ್ಲಬ್  ಹಾಗೂ ತಾಲೂಕಿನ ಚಿಕ್ಕಮಣ್ಣೂರು ಹೊರವಲಯದ ಮತ್ತೊಂದು ಬಾರ್‌ನಲ್ಲಿ ಮಾರಾಟಕ್ಕೆ ಮಾತ್ರ ಅವಕಾಶವಿದ್ದ ಅಂಗಡಿಯಲ್ಲಿಯೇ ಕುಡಿಯಲು ಅವಕಾಶ ಕಲ್ಪಿಸಿ ಅಬಕಾರಿ ಕಾನೂನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಡಿಸಿಯವರು ಎನ್.ಎಸ್. ಪ್ರಸನ್ನಕುಮಾರ ದಿಢೀರ್ ದಾಳಿ ನಡೆಸಿ, ಅಂಗಡಿ ಲೈಸೆನ್ಸ್ ರದ್ದು ಮಾಡಲು ಸೂಚಿಸಿದರು. ಡಿಸಿ ಗಿರಾಕಿಯಂತೆ ಹೋಗಿ, ಬಾರ್‌ನಲ್ಲಿ ವಿವಿಧ ವಿಷಯ ಕುರಿತು ಮಾಹಿತಿ ಪಡೆದಿದ್ದು ವಿಶೇಷವಾಗಿತ್ತು. ಈ ವೇಳೆ ಕೆಲ ಮದ್ಯಪ್ರಿಯರು ಹಾಗೂ ಸಿಬ್ಬಂದಿ ಜಿಲ್ಲಾಧಿಕಾರಿಗೆ ಇದನ್ನು ಕೇಳಲು ನೀವ್ಯಾರು? ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ನಂತರ ಪೊಲೀಸ್ ಅಧಿಕಾರಿಗಳು, ಅಬಕಾರಿ ಸಿಬ್ಬಂದಿ, ಚುನಾವಣಾಧಿಕಾರಿ ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಅಲ್ಲಿ ನಡೆಯುತ್ತಿದ್ದ ಅಕ್ರಮ ಮದ್ಯ ಮಾರಾಟ, ಮದ್ಯ ಕುಡಿಯಲು ಅದೇ ಅಂಗಡಿಯಲ್ಲಿ ಅವಕಾಶ ಕಲ್ಪಿಸಿದ ಕುರಿತ ವಿಡಿಯೋ ಚಿತ್ರೀಕರಣ ಮಾಡಿದರು. ಅಂಗಡಿ ಸಿಬ್ಬಂದಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಶ್ರೀನಿವಾಸ ಬನ್ನಿಗೋಳ ಅವಿರೋಧ ಆಯ್ಕೆ
ಹುಬ್ಬಳ್ಳಿ:  ಹೊಸದಿಲ್ಲಿಯ ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್‌ನ (ಸಿಸಿಐಎಂ) ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಗರದ ಡಾ. ಶ್ರೀನಿವಾಸ ಬನ್ನಿಗೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಸಿಸಿಐಎಂ ಸದಸ್ಯರಾಗಿ ಆಯುರ್ವೇದ ಶಿಕ್ಷಣ ಹಾಗೂ ಚಿಕಿತ್ಸಾ ಪದ್ಧತಿಯ ಬೆಳವಣಿಗಾಗಿ ಇವರು ಮಾಡಿರುವ ಸೇವೆಗೆ ಈ ಗೌರವ ಸಂದಿದೆ. ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್‌ನ ಕಾರ್ಯಕಾರಿ ಮಂಡಳಿ ಸರ್ವೋಚ್ಛ ಸಂಸ್ಥೆಯಾಗಿದ್ದು, ಆಯುರ್ವೇದ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳ ಬೆಳವಣಿಗೆಗೆ ಆವಶ್ಯಕ ಇರುವ ನಿರ್ಣಯಗಳನ್ನು ಕೈಗೊಳ್ಳುವ ಹಾಗೂ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಕಾರ್ಯವ್ಯಾಪ್ತಿ ಹೊಂದಿದೆ. ಡಾ. ಶ್ರೀನಿವಾಸ ಬನ್ನಿಗೋಳ ಅವರು ನಗರದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ.

ಮತದಾನದ ಹಕ್ಕು ಚಲಾಯಿಸಿ: ವೆಂಕಟೇಶ ಕಟ್ಟಿಮನಿ
ಗದಗ: ಬರುವ ಲೋಕಸಭಾ ಚುನಾವಣೆಯಲ್ಲಿ ಗದಗ-ಬೆಟಗೇರಿ ನಗರದ ಎಲ್ಲ ಮತದಾರರು ಪಾಲ್ಗೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕೆಂದು ನಗರಸಭೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕಟೇಶ ಕಟ್ಟಿಮನಿ ಕರೆ ನೀಡಿದರು. ಶುಕ್ರವಾರ ಸಂಸ್ಥೆಯ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದೃಢ ಭಾರತ ನಿರ್ಮಾಣವಾಗಬೇಕಾದರೆ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕಾಗಿದ್ದು, ಉತ್ತಮ ನಾಯಕನನ್ನು ಆಯ್ಕೆಗೊಳಿಸಬೇಕಾದಲ್ಲಿ ಪ್ರತಿಯೊಬ್ಬ ನಾಗರಿಕರೂ ತಮ್ಮ ಅಮೂಲ್ಯ ಮತವನ್ನು ಚಲಾವಣೆ ಮಾಡಬೇಕು. ಅಂದಾಗ ಮಾತ್ರ ದೇಶದ ಉತ್ತಮ ಪ್ರಜೆಯನ್ನು ಆಯ್ಕೆ ಮಾಡಬಹುದು ಎಂದರು.  ಈ ಸಂದರ್ಭ ಸಂಸ್ಥೆಯ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ರವಿ ಮೆಣಸಿನಕಾಯಿ ಗೆಲುವು ಖಚಿತ
ಗದಗ:  ಬಿಜೆಪಿಯ ಎನ್‌ಆರ್‌ಐ ಅಭ್ಯರ್ಥಿ, ಜನರಿಗೆ ಸಿಗದ ಶಿವಕುಮಾರ ಉದಾಸಿ ಹಾಗೂ ಕಾಂಗ್ರೆಸ್ ಒಳಜಗಳದಿಂದಾಗಿ ಜೆಡಿಎಸ್‌ನ ರವಿ ಮೆಣಸಿನಕಾಯಿ ಗೆಲುವು ಖಚಿತ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು. ಶುಕ್ರವಾರ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಚುನಾವಣೆ ಕಾರ್ಯತಂತ್ರ ರಚಿಸಲು ಕರೆದ ಪಕ್ಷದ ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಸಾಧನೆ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿ ಪಕ್ಷದ ಅಭ್ಯರ್ಥಿ ಆಯ್ಕೆಗೆ ಶ್ರಮಿಸಬೇಕು ಎಂದರು. ಅಭ್ಯರ್ಥಿ ರವಿ ಮೆಣಸಿನಕಾಯಿ ಮಾತನಾಡಿದರು. ಬಿ.ಎಸ್. ಹಿರೇಗೌಡ್ರ, ವೆಂಕರೆಡ್ಡಿ ಹೂಲಿ, ಬಸವರಾಜ ಉಪನಾಳ, ಬಿ.ಎಸ್. ದೇಸಾಯಿ, ಶಿವು ಲಮಾಣಿ, ಎಂ.ಜಿ. ವಡ್ಡಟ್ಟಿ, ಎಂ.ಎಂ. ಕುಲಕರ್ಣಿ, ಉಮೇಶ ಮಲ್ಲಾಪೂರ, ಪುಷ್ಪಲತಾ ಮಾಡಲಗೇರಿ, ರಮೇಶ ಕಲಬುರ್ಗಿ, ದಾವಲ ಮುಳಗುಂದ, ಹನುಮಂತಗೌಡ ಕಲ್ಮನಿ, ಪ್ರಭುರಾಜಗೌಡ ಪಾಟೀಲ, ಅಬ್ದುಲ್ ನರಸಾಪುರ ಇತರರಿದ್ದರು.

ಜನಪರ ಯೋಜನೆಗಳೇ
ಗೆಲುವಿಗೆ ಶ್ರೀರಕ್ಷೆ: ಪಾಟೀಲ
ಗಜೇಂದ್ರಗಡ: ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ನೀಡಿರುವ ಜನಪರ ಯೋಜನೆಗಳೇ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಮ್ಯಾಕಲ್‌ಝರಿ ಗ್ರಾಮದಲ್ಲಿ ಶುಕ್ರವಾರ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಪರ ಮನೆಮನೆಗೆ ತೆರಳಿ ಮತಯಾಚಿಸಿದರು. ಎನ್.ಕೆ. ಬೇವಿನಮರದ, ವಿ.ಎನ್. ಸೊನ್ನದ, ವೀರಣ್ಣ ಶೆಟ್ಟರ ಮಾತನಾಡಿದರು. ಇದಕ್ಕೂ ಮುನ್ನ ಗ್ರಾಮದ ಜಾಗೃತ ಆಂಜನೇಯ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕುಂಟೋಜಿ, ವದೆಗೋಳ, ಜಿಗೇರಿ, ಬೈರಾಪೂರ, ತಾಂಡಾ, ಕಣವಿ ಹಾಗೂ ಕಾಲಕಾಲೇಶ್ವರ ಗ್ರಾಮಗಳಿಗೆ ತೆರಳಿ ಮತಯಾಚಿಸಿದರು.

ಇಂದು ಬಿಜೆಪಿಗೆ ಅನಿಲ ಮೆಣಸಿನಕಾಯಿ ಸೇರ್ಪಡೆ
ಗದಗ: ಬಿಎಸ್‌ಆರ್ ಪಕ್ಷದ ಮುಖಂಡ ಅನಿಲ ಮೆಣಸಿನಕಾಯಿ ನೇತೃತ್ವದಲ್ಲಿ ಮಾ. 30ರಂದು ಬಿಎಸ್‌ಆರ್ ಪಕ್ಷದ ಸಾವಿರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಆರ್ ಪಕ್ಷದಿಂದ ಸ್ಪರ್ಧಿಸಿದ್ದ ಅನಿಲ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ಮಾ. 30ರಂದು ಸಂಜೆ ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರವಾಗಿ ಗದಗ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಬಿ. ಶ್ರೀರಾಮಲು, ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಕಳಕಪ್ಪ ಬಂಡಿಯವರ ಸಮ್ಮುಖದಲ್ಲಿ ಬಿಎಸ್‌ಆರ್ ಕಾರ್ಯಕರ್ತರು ಸೇರ್ಪಡೆಗೊಳ್ಳಲಿದ್ದಾರೆ. ಬಿಎಸ್‌ಆರ್ ಕಾರ್ಯಕರ್ತರು, ಪದಾಧಿಕಾರಿಗಳು, ಸದಸ್ಯರು ಗದಗ ನಗರದ ಮಹಾತ್ಮ ಗಾಂಧಿವೃತ್ತದಲ್ಲಿ ಮಾ. 30ರ ಮಧ್ಯಾಹ್ನ 3.30ಕ್ಕೆ ಆಗಮಿಸಬೇಕೆಂದು ವೆಂಕಟೇಶ ದಾಸರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಟಗೇರಿ: ಬಿಜೆಪಿ ಯುವ ಮೋರ್ಚಾದಿಂದ ಪ್ರಚಾರ
ಗದಗ: ಬಿಜೆಪಿ ಯುವ ಮೋರ್ಚಾ ವತಿಯಿಂದ ಹಾವೇರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ್ ಉದಾಸಿ ಪರ ಶನಿವಾರ ಬೆಟಗೇರಿಯ 10 ಹಾಗೂ 6ನೇ ವಾರ್ಡ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯ ನಡೆಸಲಾಯಿತು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಗನ್ ರಾಜಪುರೋಹಿತ ಹಾಗೂ 10ನೇ ವಾರ್ಡಿನ ನಗರಭೆ ಸದಸ್ಯ ಮಾಧವ ಗಣಾಚಾರಿ ಮನೆಯಿಂದ ಪ್ರಚಾರ ಆರಂಭಿಸಲಾಯಿತು. ಮನೆ ಮನೆಗೆ ತೆರಳಿ ಮತಯಾಚಿಸಿದರು.  ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಶಾಂತಾ ಹೊನ್ನಳ್ಳಿ, ಮೋಹನ್ ಹೊನ್ನಳ್ಳಿ, ಶಿವರಾಜಗೌಡ ಹಿರೇಮನಿ ಪಾಟೀಲ್, ಶಹರ ಯುವ ಮೋರ್ಚಾ ಅಧ್ಯಕ್ಷ ಸುಧೀರ ಕಾಟಿಗಾರ ಹಾಗೂ ಶಹರ ಪ್ರಧಾನ ಕಾರ್ಯದರ್ಶಿ ಶಿದ್ರಾಮೇಶ ಹಿರೇಮಠ, ವಿನಾಯಕ ಹಬೀಬ, ಪ್ರಕಾಶ ಹಿಂಡಿ ಭಾಗವಹಿಸಿದ್ದರು.

ಮತದಾನಕ್ಕಾಗಿ ಪ್ರತಿಜ್ಞಾವಿಧಿ ಬೋಧನೆ
ನರಗುಂದ: ತಾಲೂಕಿನ ಅರಿಷಣಗೋಡಿ ಗ್ರಾಮದ ಮಾರುತಿ ರಂಗ ಮಂದಿರದಲ್ಲಿ ಜೈ ಹನುಮಾನ್ ರೈತ ಶಕ್ತಿ ಗುಂಪು ಹಾಗೂ ಸ್ತ್ರೀಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಪ್ರತಿಜ್ಞಾವಿಧಿ ಬೋಧನೆ ಸಮಾರಂಭ ಏರ್ಪಡಿಸಲಾಯಿತು. ಚಿ. ಚನ್ನಬಸವರಾಜ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಚುನಾವಣೆಯಲ್ಲಿ ಯಾವುದೇ ಪಕ್ಷ, ಜಾತಿ, ಹಣದ ಆಮಿಷಕ್ಕೆ ಒಳಗಾಗದೆ ಧೈರ್ಯದಿಂದ ಮತದಾನ ಮಾಡುತ್ತವೆಂದು ಪ್ರತಿಜ್ಞೆ ಬೋಧಿಸಬೇಕೆಂದು ಹೇಳಿದರು. ಎಲ್ಲಾ ಗ್ರಾಮಸ್ಥರು ಚುನಾವಣೆಯ ದಿನದಂದು ಯಾವುದೇ ಆಸೆ, ಆಮಿಷಕ್ಕೆ ಒಳಗಾಗವುದಿಲ್ಲ. ಅಲ್ಲದೇ ಉತ್ತಮ ಪಕ್ಷಕ್ಕೆ, ಒಳ್ಳೆಯ ವ್ಯಕ್ತಿಗೆ ಮತದಾನ ಮಾಡುತ್ತೇವೆಂದು ಪ್ರತಿಜ್ಞೆ ಸ್ವೀಕರಿಸಿದರು. ಬಸವರಡ್ಡಿ ರಾಯರಡ್ಡಿ, ಎಚ್.ಎನ್. ಹಳಕಟ್ಟಿ, ಬಿ.ವೈ. ಮೇಟಿ ಇದ್ದರು.

ಸ್ವೀಪ್ ವಾಹನ ಸಂಚಾರಕ್ಕೆ  ಸಿಇಒ ಚಾಲನೆ
ಗದಗ: ಧ್ವನಿವರ್ಧಕದ ಮೂಲಕ ಮತದಾರ ಜಾಗೃತಿ ಆಶಯ ಗೀತೆಗಳ ಜತೆಗೆ ಏ.17ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕೆಂದು ಆಗ್ರಹಿಸುವ ಸ್ವೀಪ್ ವಾಹನಕ್ಕೆ ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಓ ವೀರಣ್ಣ ತುರಮರಿ ಶುಕ್ರವಾರ ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಲಾಯಿತು. ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ರಾಮಪ್ಪ ಹಟ್ಟಿ, ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಹಾಗೂ ಡಿ.ಆರ್.ಡಿ.ಎ ಯೋಜನಾ ನಿರ್ದೇಶಕ ಟಿ. ದಿನೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಇದ್ದರು. ವಾಹನ ಮಾ. 30ರ ವರೆಗೆ ಗದಗ ತಾಲೂಕಿನ ಗ್ರಾಮಗಳಲ್ಲಿ, ಮಾ. 31 ಹಾಗೂ ಏ. 1ರಿಂದ 2ರ ವರೆಗೆ ಮುಂಡರಗಿ, ಏ. 3ರಿಂದ 5 ಶಿರಹಟ್ಟಿ, 6ರಿಂದ 8 ರೋಣ, 9ರಿಂದ 11 ನರಗುಂದ ಹಾಗೂ 12ರಿಂದ 14ರ ವರೆಗೆ ಗದಗ-ಬೆಟಗೇರಿ ನಗರ ಪ್ರದೇಶದಲ್ಲಿ ಸುತ್ತಲಿದೆ.

ಮತದಾನ ಜಾಗೃತಿಗೆ ಸೈಕಲ್ ಜಾಥಾ
ಗದಗ: ಸ್ಥಳೀಯ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8ನೇ ಹಾಗೂ 9ನೇ ತರಗತಿ ವಿದ್ಯಾರ್ಥಿಗಳು ಮತದಾನದ ಜಾಗೃತಿ ಕುರಿತು ಸೈಕಲ್ ಜಾಥಾವನ್ನು ಶನಿವಾರ ನಗರದಲ್ಲಿ ನಡೆಸಿದರು. ಮುಳಗುಂದ ನಾಕಾ ವೃತ್ತದ ಮೂಲಕ ಕಿತ್ತೂರ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಟಾಂಗಾ ಕೂಟ ಹಾಗೂ ಮಹೆಂದ್ರಕರ ವೃತ್ತ ನಂತರ ಗಾಂಧಿ ವೃತ್ತದ ಮೂಲಕ ಜಾಥಾ ನಡೆಸಿ ಗದಗ-ಬೆಟಗೇರಿ ನಗರಸಭೆಯಲ್ಲಿ ಮುಕ್ತಾಯಗೊಳಿಸಲಾಯಿತು. ಪ್ರಧಾನ ಗುರು ಎಸ್.ಬಿ. ಗೌಡರ, ಪ್ರಭಾಕುಮಾರಿ ಬಿ.ಎಂ, ಶಿಕ್ಷಕ ಐ.ಎಸ್. ಅಂಗಡಿ. ಬಿ.ಕೆ. ನಿಂಬನಗೌಡರ, ಬಿ.ಬಿ. ಇಬ್ರಾಹಿಂಪೂರ, ಕೆ.ವಿ. ಕೋರಡ್ಡಿ, ಬಿ.ಬಿ. ಸಂಕನೂರ, ಎಂ.ಎಸ್. ರಾಮಣ್ಣವರ, ಸಿ.ಎಸ್. ಮಾನ್ವಿ, ಎಂ.ಎಸ್. ಹುಣಶೀಮರದ, ಎಸ್.ವಿ. ಕುರಹಟ್ಟಿ, ಎಂ.ಎಸ್. ಹಿಟ್ನಳ್ಳಿ, ಎಂ.ಎಂ. ಕಿರೇಸೂರ, ಎಸ್.ಎಚ್. ಭಜಂತ್ರಿ, ಆರ್.ಕೆ. ಶಿವನಗೌಡರ ಇದ್ದರು.

ಉಂಡ ಮನೆಗೆ ಕನ್ನ: ಮಹಿಳೆ ಬಂಧನ
ಕುಮಟಾ:  ಕೆಲ ದಿನಗಳ ಹಿಂದೆ ಧಾರೇಶ್ವರದ ಮನೆಯೊಂದರಲ್ಲಿ ಕೆಲಸಕ್ಕೆ ಇದ್ದು, ಬಂಗಾರದ ಮಾಂಗಲ್ಯ ಸರ, ಎರಡು ಬಳೆ ಹಾಗೂ ಮೊಬೈಲ್ ಕದ್ದು ಪರಾರಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಭಟ್ಕಳ ತಾಲೂಕಿನ ಕೆಂಚನಮನೆ ಆಸರಕೆರೆ ಗ್ರಾಮದ ನಿವಾಸಿ ಶ್ವೇತಾ ನಾಯ್ಕ (30) ಹಾಗೂ ಕಳ್ಳತನಕ್ಕೆ ಸಹಕರಿಸಿದ ಹೊನ್ನಾವರ ತಾಲೂಕಿನ ಹಾಡಗೇರಿ ನಿವಾಸಿ ಮಾರುತಿ ಸುಬ್ರಾಯ ನಾಯ್ಕ (29) ಅವರನ್ನು ಬಂಧಿಸಲಾಗಿದೆ. ಸಿಪಿಐ ಕೆ. ಶ್ರೀಕಾಂತ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಕುಮಾರ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಗಂಗಾಧರ ಹೊಂಗಲ್ ಮತ್ತು ಪ್ರದೀಪ ರೇವಣಕರ್ ಕಾರ್ಯಾಚರಣೆ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement