ಕಾರ್ಮಿಕರು ಸಂಘಟಿತರಾಗಲಿ
ಮುಂಡರಗಿ: ಉತ್ತಮ ಹಾಗೂ ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಪ್ರತಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಕಾರ್ಮಿಕ ಶಕ್ತಿ ದೊಡ್ಡ ಶಕ್ತಿ. ಆದರೆ, ಅಸಂಘಟಿತ ಕಾರ್ಮಿಕರು ಇಂದಿಗೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಎಲ್ಲ ಕಾರ್ಮಿಕರು ಸಂಘಟಿತರಾಗಿ ತಮಗೆ ಸಿಗುವಂತಹ ಸೌಲಭ್ಯಗಳ ಕುರಿತು ಚಿಂತಿಸಬೇಕು ಎಂದು ಪ್ರಗತಿಪರ ಚಿಂತಕ ಶಾಂತಕುಮಾರ ಪೂಜಾರ ಹೇಳಿದರು.
ಅವರು ಗುರುವಾರ ಬೆಳಗ್ಗೆ ಮುಂಡರಗಿ ತಾಲೂಕು ಕಾರ್ಮಿಕರ ಮಹಾ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯ ಮೆರವಣಿಗೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಾರ್ಮಿಕರು ಹೆಚ್ಚು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ತಮ್ಮ ಹಕ್ಕು ಪಡೆಯಲು ಅನುಕೂಲವಾಗುತ್ತದೆ. ಕಾರ್ಮಿಕರು ತಮ್ಮ ಕನಿಷ್ಠ ಹಕ್ಕುಗಳನ್ನಾದರೂ ಪಡೆಯಲು ಧ್ವನಿ ಎತ್ತುವುದು ಅವಶ್ಯವಾಗಿದೆ ಎಂದರು.
ರಂಗಕರ್ಮಿ ಬಿ.ಬಾಬು ಮಾತನಾಡಿ, ಕಾರ್ಮಿಕರೆಲ್ಲರೂ ಒಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾರ್ಮಿಕ ವರ್ಗವೇ ಇಲ್ಲದಂತಾಗುತ್ತದೆ ಎಂದರು. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಗಳು ಕೆಂಪು ನಿಶಾನೆ ತೋರಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕೋಟೆ ಭಾಗದ ಆಂಜನೇಯ ದೇವಸ್ಥಾನದಿಂದ ಹೊರಟ ಮೆರವಣಿಗೆ ಬಜಾರ, ಹೊಸ ಬಸ್ ನಿಲ್ದಾಣದ ಮೂಲಕ ಎಪಿಎಂಸಿಗೆ ಬಂದು ಮುಕ್ತಾಯಗೊಂಡಿತು. ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ರಾಮು ಕಲಾಲ, ಶೇಖರಾಜ ಹೊಸಮನಿ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನ, ಮುದಿಯಪ್ಪ ಕುಂಬಾರ, ದೇವು ಹಡಪದ, ಶೇಖರ ಹಡಪದ, ರಾಮಚಂದ್ರ ಗಾರವಾಡ, ಬಸವರಾಜ ನವಲಗುಂದ, ವೀರಪ್ಪ ಕುಂಬಾರ, ಗ್ಯಾನಪ್ಪ ಶೀರಿ, ನಾಗರಾಜ ಕೊರ್ಲಹಳ್ಳಿ, ಆರ್.ಎಚ್. ಮಠದ, ಟಿ.ಎನ್. ಕಟ್ಟಿಮನಿ, ಯಮನಪ್ಪ ಪೂಜಾರ, ಗುಡದಪ್ಪ ನೀರಲಗಿ, ಬಾಶುಸಾಬ್ ವಡ್ಡಟ್ಟಿ, ಹುಸೇನಸಾಬ್ ವಕಾರ, ಅನಂತಕುಮಾರ ಚಿತ್ರಗಾರ, ಕೃಷ್ಣಾ ರಾಮೇನಹಳ್ಳಿ, ಜಸ್ಮಾಯಿಲ್ ಮುಲ್ಲಾ, ಮಹೇಶ ಬಡಿಗೇರ, ರಾಜೇಸಾಬ್ ಬೆಟಗೇರಿ, ಡಿ.ಎಂ. ಕಾತರಕಿ, ಅಬ್ದುಲ್ ಖುರೇಶಿ, ಡಾ. ಬಸವರಾಜ ಮೇಟಿ ಮುಂತಾದವರಿದ್ದರು. ಮೆರವಣಿಗೆಯಲ್ಲಿ ಎತ್ತಿನ ಗಾಡಿ, ರಿಕ್ಷಾಗಳು ಭಾಗವಹಿಸಿದ್ದವು. ಮೆರವಣಿಗೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘ, ಬಾರಬೆಂಡರ್ ಸೆಟ್ರಿಂಗ್ ಸಂಘ, ಎಪಿಎಂಸಿ ಹಮಾಲರ ಸಂಘ, ಜೈಹಿಂದ್ ಆಟೋ ಚಾಲಕರ ಸಂಘ, ಎಪಿಎಂಸಿ ಎತ್ತಿನ ಗಾಡಿ ಸಂಘ, ಕಾರು ಚಾಲಕರ ಸಂಘ, ಕಲ್ಲು ಒಡೆಯುವ ಕಾರ್ಮಿಕ ಸಂಘ, ಕಾಂಕ್ರಿಟ್ ಹಾಕುವವರ ಸಂಘ, ಬುನಾದಿ ಕಡೆಯುವವರ ಸಂಘ, ಕಾರ್ಪೆಂಟರ್ ಸಂಘ ಮುಂತಾದ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು. ಮೆರವಣಿಗೆಗೂ ಮೊದಲು ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಬೆಳಗ್ಗೆ 8ಕ್ಕೆ ಇಲ್ಲಿಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಲ್ಲಿಯ ರೋಗಿಗಳಿಗೆ ಹಣ್ಣು-ಹಂಪಲ ನೀಡಿದರು.