ಗುಂಪುಗಳ ನಡುವೆ ಘರ್ಷಣೆ; 6 ಜನರಿಗೆ ಗಾಯ
ಯಾದಗಿರಿ:ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ 6 ಜನರಿಗೆ ಗಾಯವಾಗಿದೆ. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ನಗರದ ಗಂಜ್ ಪ್ರದೇಶದ ಬಳಿ ಶುಕ್ರವಾರ ಸಂಜೆ ಎರಡು ಗುಂಪುಗಳ ನಡುವೆ ನಡೆದ ಕಲ್ಲುತೂರಾಟ ಮತ್ತು ಮಾರಾಮಾರಿಯಲ್ಲಿ 6 ಜನರು ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಮೊದಲು ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸತೀಸ್ರಡ್ಡಿ, ಅಮೀನರಡ್ಡಿ, ಮಲ್ಲನಗೌಡ, ಶರಣಬಸಪ್ಪ, ವಿಕ್ಕಿ ಮತ್ತು ರೋಹಿತರಡ್ಡಿ ಎನ್ನುವವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮೂರು ಬೈಕ್ಗಳು ಜಖಂಗೊಂಡಿವೆ. ಕೂಡಲೆ ಯಾದಗಿರಿ ನಗರದ ಪೋಲಿಸರು ಸ್ಥಳಕ್ಕೆ ಧಾವಿಸಿ ನಾಲ್ಕು ಜನರನ್ನು ಬಂಧಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-