ಪುರಸಭೆ ಜಾಗದಲ್ಲಿ ಅಕ್ರಮ ಕಟ್ಟಡ
ಗಜೇಂದ್ರಗಡ: ಪಟ್ಟಣದ ಪುರಸಭೆ ವ್ಯಾಪ್ತಿಯ ಹಿಂದುಳಿದ ಸಮುದಾಯ ವಾಸಿಸುವ ಬಡಾವಣೆಯ ಪುರಸಭೆ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಅದೇ ಬಡಾವಣೆಯ ಕರಿಯಪ್ಪ ಕೊರವರ ಕ್ಷೇಮಾಭಿವೃದ್ಧಿ ಸಂಘ ಪುರಸಭೆಗೆ ನೀಡಿದ ದೂರು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಪುರಸಭೆ ಆಡಳಿತ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ.
ಪಟ್ಟಣದ 21ನೇ ವಾರ್ಡ್‌ನ ಚೌಕಿಮಠದಿಂದ ಕುಷ್ಟಗಿ ರಸ್ತೆಗೆ ತೆರಳುವ ಮುಖ್ಯ ರಸ್ತೆಯ ಎಡಭಾಗದ ಗಟಾರಿಗೆ ಹೊಂದಿಕೊಂಡ ಸರ್ಕಾರಿ ಜಾಗದಲ್ಲಿ ಅದೇ ವಾರ್ಡ್‌ನ ನಿವಾಸಿ ಕನಕಪ್ಪ ಅರಳಿ ಗಿಡದ ಎಂಬವರು ರಾಜಕೀಯ ಪ್ರಭಾವ ಬಳಸಿ ರಾಜಾರೋಷವಾಗಿ ಕಟ್ಟಡ ನಿರ್ಮಿಸುತ್ತಿರುವುದರ ಹಿಂದೆ ಪುರಸಭೆಯ ಕೆಲ ಪ್ರಭಾವಿ ನಾಯಕರ ಹಾಗೂ ಅಧಿಕಾರಿಗಳ ಕೈವಾಡವಿದೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಅಕ್ರಮವಾಗಿ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿರುವವರ ಹಾಗೂ ಅವರಿಗೆ ಬೆಂಗಾವಲಾಗಿ ನಿಂತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಪುರಸಭೆಯ ಆಡಳಿತ ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನ ವರೆಗೂ ನಿಯಮಾವಳಿಯಂತೆ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಸಿಲ್ಲ. ಜನರ ಸಮಸ್ಯೆಗಳ ಜತೆ ಆಡಳಿತಾತ್ಮಕ ಸಮಸ್ಯೆ ಪರಿಹಾರಕ್ಕೆ ಸರ್ವ ಸದಸ್ಯರ ಅಭಿಪ್ರಾಯ ಕ್ರೋಡೀಕರಿಸಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಇರಾದೆ ತೋರಿಲ್ಲ. ತಮಗೆ ಇಷ್ಟ ಬಂದಾಗ ಸಭೆ ನಡೆಸಿ, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಾವಳಿಗಳನ್ನು ರೂಪಿಸಿ, ಅಕ್ರಮ ನಡೆಸುವವರಿಗೆ ಅನುಕೂಲ ಕಲ್ಪಿಸಿಕೊಡುತ್ತಿದ್ದಾರೆ ಎಂದು ಪುರಸಭೆ ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಪುರಸಭೆ ಆಡಳಿತ ವಹಿಸಿಕೊಂಡ ಬಳಿಕ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಪುರಸಭೆಯಲ್ಲಿ ಆಡಳಿತ ಮಂಡಳಿಯ ನಡವಳಿಕೆ ಅಧಿಕಾರಿಗಳಿಗೆ ಬೇಸರ ಮೂಡಿಸಿದೆ. ಸರ್ಕಾರಿ ಜಾಗದಲ್ಲಿ ಯಾರೇ ಅಂಗಡಿ, ಮನೆ ನಿರ್ಮಿಸಿಕೊಂಡರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.