ಬಲಿಗಾಗಿ ಬಾಯ್ದೆರೆದ ಕೊಳವೆ ಬಾವಿ!
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಮೇ 1
ಮಕ್ಕಳು ತೆರೆದ ಕೊಳವೆಬಾವಿಗಳಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ದೇಶದಲ್ಲಿ ಸಾಕಷ್ಟು ವರದಿಯಾಗಿವೆ. ಈ ಕುರಿತು ಸುಪ್ರೀಂಕೋರ್ಟ್ ಕೊಳವೆಬಾವಿ ಕೊರೆಯಲು ಮತ್ತು ಕೊರೆಯಿಸಿದ ನಂತರ ಅದನ್ನು ನಿರ್ವಹಣೆಗೆ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ಆದರೆ, ಲಕ್ಷ್ಮೇಶ್ವರ ಸಮೀಪದಲ್ಲಿಯೇ ಕೊಳವೆಬಾವಿಯೊಂದನ್ನು ಬಾಯ್ದೆರೆದು ಬಿಟ್ಟಿದ್ದು, ಇದು ಜನತೆ ಆತಂಕಪಡುವಂತಾಗಿದೆ.
ಖಾಸಗಿಯಾಗಿ ಕೊರೆಯಿಸುವ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗದೇ ಇದ್ದಲ್ಲಿ ತಕ್ಷಣವೇ ಅದನ್ನು ಮುಚ್ಚಬೇಕು ಎಂದು ದೊಡ್ಡದಾಗಿ ಪ್ರಚಾರ ಮಾಡುವ ಇಲಾಖೆಗಳು (ಜಿಪಂ) ಈ ವಿಷಯದಲ್ಲಿ ಮೌನ ವಹಿಸಿದೆ. ತೆರೆದ ಕೊಳವೆಬಾವಿಯಲ್ಲಿ ಅನೇಕ ಮಕ್ಕಳು ಮೃತಪಟ್ಟಿರುವ ಘಟನೆಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ವರದಿಯಾಗಿವೆ. ಆದರೆ, ಅದೃಷ್ಟ ಗದಗ ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ವರದಿಯಾಗಿಲ್ಲ. ಸದ್ಯ ಲಕ್ಷ್ಮೇಶ್ವರ ಬಳಿ ಇರುವ ತೆರೆದ ಕೊಳವೆಬಾವಿಯನ್ನು ಕೂಡಲೇ ಮುಚ್ಚದೇ ಇದ್ದಲ್ಲಿ ಇಲ್ಲಿಯೂ ಬಲಿ ಬೀಳುವ ಸಾಧ್ಯತೆ ನಿಚ್ಚಳ.
ಎಲ್ಲಿದೆ ಈ ಕೊಳವೆಬಾವಿ: ಲಕ್ಷ್ಮೇಶ್ವರದಿಂದ ಹರದಗಟ್ಟಿ ಹೋಗುವ ಮಾರ್ಗದಲ್ಲಿ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಕುಡಿವ ನೀರಿಗಾಗಿ ಈ ಕೊಳವೆಬಾವಿಯೊಂದನ್ನು 2-3 ತಿಂಗಳ ಹಿಂದೆ ಕೊರೆಯಿಸಿದ್ದಾರೆ. 200 ಅಡಿಗಿಂತಲೂ ಹೆಚ್ಚು ಆಳದ ಕೊಳವೆಬಾವಿ ಕೊರೆಯಿಸಲಾಗಿದೆ. ಆದರೆ, ಅಲ್ಲಿ ನೀರು ಬಾರದ್ದರಿಂದ ಅದನ್ನು ಹಾಗೆ ಬಿಟ್ಟಿದ್ದಾರೆ. ಇದು ದುರಂತಕ್ಕೆ ಎಡೆಮಾಡಿಕೊಡುವುದರಲ್ಲಿ ಸಂದೇಹವಿಲ್ಲ.
ಕಾಟಾಚಾರದ ಕ್ರಮ: ಈ ಕೊಳವೆಬಾವಿಯಲ್ಲಿ ನೀರು(ಸಿಗದೇ ಇದ್ದಲ್ಲಿ) ಬೀಳದ ಅದನ್ನು ಮುಚ್ಚಿಸಬೇಕು. ಆದರೆ, ಅಧಿಕಾರಿಗಳು ಮತ್ತು ಬೋರ್‌ವೆಲ್ ಹಾಕಲು ಬಂದವರು ಕೇವಲ ಕಾಟಾಚಾರಕ್ಕೆ ಎನ್ನುವ ರೀತಿಯಲ್ಲಿ ಈ ತೆರೆದ ಕೊಳವೆಬಾವಿಯ ಮೇಲೆ ಮುಳ್ಳಿನ ಕಂಟಿ ಇಟ್ಟು ಹೋಗಿದ್ದಾರೆ. ಮುಳ್ಳಿನ ಕಂಟಿಗಳು ಗಾಳಿಗೆ ಹಾರಿ ಹೋಗುವುದು. ದಾರಿಯಲ್ಲಿದ್ದ ಕೊಳವೆಬಾವಿಯಲ್ಲಿ ಯಾರಾದರೂ ಜಾರಿ ಬಿದ್ದರೆ, ಅದರಲ್ಲಿಯೂ ಸಣ್ಣ ಮಕ್ಕಳು ಬಿದ್ದರಂತೂ 150 ಅಡಿ ಆಳಕ್ಕೆ ಹೋಗುವುದು ಖಂಡಿತ. ಈ ಬಗ್ಗೆ ಜಿಲ್ಲಾ ಪಂಚಾಯತಿ ಹಿರಿಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
- ಅಶೋಕ ಸೊರಟೂರ