ವಿರೂಪಾಪುರ ತಾಂಡಾಕ್ಕೆ ಕುಡಿಯುವ ನೀರು
ಮುಂಡರಗಿ: ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ವಿರೂಪಾಪುರ ತಾಂಡಾದಲ್ಲಿ ಕುಡಿಯುವ ನೀರಿನ ಬವಣೆಯ ಕುರಿತು ವಿರೂಪಾಪುರ ತಾಂಡಾದಲ್ಲಿ ನೀರಿಗೆ ಬರ ಎನ್ನುವ ಶೀರ್ಷಿಕೆಯಡಿಯಲ್ಲಿ 'ಕನ್ನಡಪ್ರಭ' ವರದಿ ಮಾಡಿತ್ತು. ಗ್ರಾಮದಲ್ಲಿ 1500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಕುಡಿಯಲು ಶುದ್ಧ ನೀರು ಇಲ್ಲದೇ ಗ್ರಾಮಸ್ಥರು ರೈತರ ಹೊಲಗಳಿಗೆ ತೆರಳಿ ನೀರು ತಂದು ಕುಡಿಯುವ ಅನಿವಾರ್ಯತೆ ಗ್ರಾಮದ ಜನತೆಗಿರುವ ಕುರಿತು ಪತ್ರಿಕೆಯಲ್ಲಿ ಸವಿಸ್ತಾರವಾಗಿ ವರದಿ ಮಾಡಲಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಮುಂಡರಗಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಡಿ. ಮೋಹನ್ ಅವರು ವಿರೂಪಾಪುರ ತಾಂಡಾಕ್ಕೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಕಳುಹಿಸಲು ಕ್ರಮ ತೆಗೆದುಕೊಂಡಿದ್ದಾರೆ. ಅವರು 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಇದೀಗ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತುಂಗಭದ್ರಾ ನದಿ ನೀರು ಕೊಡುವ ಕುರಿತು ಪೈಪ್‌ಲೈನ್‌ಗಳ ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯ್ತಿಯಿಂದ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಾಪನೆಗೂ ಯೋಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. 'ಕನ್ನಡಪ್ರಭ' ವರದಿಯಿಂದಾಗಿ ಗ್ರಾಮಕ್ಕೆ ನೀರು ಸರಬರಾಜು ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪತ್ರಿಕೆಗೆ ಅಭಿನಂದಿಸಿದ್ದಾರೆ.