ಸಂಕೇಶ್ವರ ಹೆಮ್ಮೆಯ ಸಾಧಕ: ತೋಂಟದ ಶ್ರೀ
ಗದಗ: ಸಾರಿಗೆ ಉದ್ಯಮ, ಪತ್ರಿಕೋದ್ಯಮದಲ್ಲಿ ಛಲ ಬಿಡದ ಸಾಧಕರಾದ ಕಾಯಕಯೋಗಿ ವಿಜಯ ಸಂಕೇಶ್ವರರ ಸಾಧನೆ ಅನನ್ಯ. ಗದಗ ಮೂಲದವರಾದ ಸಂಕೇಶ್ವರ ದೇಶದ ಹೆಮ್ಮೆಯ ಕನ್ನಡಿಗ ಸಾಧಕ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ 2169ನೇ ಶಿವಾನುಭವದಲ್ಲಿ ಈಚೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್‌ಮನ್ ವಿಜಯ ಸಂಕೇಶ್ವರ, ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ ಹಾಗೂ ಹಿಂದೂಸ್ತಾನಿ ಗಾಯಕ ಎಂ. ವೆಂಕಟೇಶಕುಮಾರ ಅವರ ಸನ್ಮಾನಿಸಿ ಆಶೀರ್ವಚನ ನೀಡಿದರು. ಗದಗನ ಖ್ಯಾತಿ ಮೆರೆದ ಪುಟ್ಟರಾಜರು, ವೀರೇಶ್ವರ ಪುಣ್ಯಾಶ್ರಮದ ಜತೆಗೆ ಇದೀಗ ಗದಗ ಎಂದರೆ ಉದ್ಯಮಿ ಸಂಕೇಶ್ವರರ ಹೆಸರು ಕೂಡ ಸೇರಿಕೊಂಡಿದೆ. ವಿಜಯ ಸಂಕೇಶ್ವರರದು ಬಸವಾದಿ ಶರಣರ 'ಕಾಯಕವೇ ಕೈಲಾಸ' ತತ್ವ, ಪರಿಶ್ರಮ ನಂಬಿ ಬೆಳಕು ಕಂಡ ಬದುಕು. 20 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿರುವ ಅವರ ಸಂಸ್ಥೆಯ ಬೆಳವಣಿಗೆ ಹೆಮ್ಮೆಯ ಸಂಗತಿ. ಅವರಿಗೆ ಗೌರವ ಡಾಕ್ಟರೇಟ್ ನೀಡಿರುವ ಕವಿವಿಯ ಕ್ರಮ ಸಮಂಜಸವಾದದದ್ದು ಎಂದರು.
ಪದ್ಮರಾಜ ದಂಡಾವತಿ ಅವರ ಪತ್ರಿಕೋದ್ಯಮ ರಂಗದ ಸಾಧನೆ ಅವಿಸ್ಮರಣೀಯ. ಸಂಗೀತದ ದಿಗ್ಗಜ ಪ್ರತಿಭೆ ಎಂ. ವೆಂಕಟೇಶಕುಮಾರ ಅವರು ಕಲಿತಿದ್ದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಎನ್ನುವುದು ಕೂಡ ಗಮನಾರ್ಹ ಸಂಗತಿ. ಈ ತ್ರಿಮೂರ್ತಿಗಳ ಸಾಧನೆ ಇತರರಿಗೆ ಮಾದರಿ. ಅವರಿಗೆ ಪದವಿ ನೀಡಿದ್ದರಿಂದ ಡಾಕ್ಟರೇಟ್‌ಗೆ ಗೌರವ ಬಂದಿದೆ ಎಂದರು.
ಆತ್ಮವಿಶ್ವಾಸ ಹೊಂದಿ: ಡಾ. ವಿಜಯ ಸಂಕೇಶ್ವರ ಮಾತನಾಡಿ, ವೀರಶೈವ ಲಿಂಗಾಯತ ಮಠ-ಮಾನ್ಯಗಳು ಎಲ್ಲ ಜಾತಿ-ಜನಾಂಗದ ಜನತೆಗೆ ಶಿಕ್ಷಣ, ಅನ್ನ ದಾಸೋಹ ನೀಡಿದ ಖ್ಯಾತಿ ಪಡೆದಿವೆ. ವೀರಶೈವ ಲಿಂಗಾಯತ ಸಮುದಾಯದ ಜನತೆ ತಮ್ಮ ವಂಶಪಾರಂಪರ್ಯ ಉದ್ಯೋಗ, ವ್ಯಾಪಾರಕ್ಕೆ ಸೀಮಿತರಾಗದೆ ಆತ್ಮವಿಶ್ವಾಸದಿಂದ ಹೊಸ ಹೊಸ ಉದ್ಯಮ, ವೃತ್ತಿಗಳಿಗೆ ಧೈರ್ಯವಾಗಿ ಮುಂದಾಗಿ ತಮ್ಮ ಪ್ರತಿಭೆ ಮೆರೆಯಬೇಕು ಎಂದರು.
ಪುಸ್ತಕ ಸಂಸ್ಕೃತಿಗೆ ಮರಳಿ: ಡಾ. ಪದ್ಮರಾಜ ದಂಡಾವತಿ ಮಾತನಾಡಿ, ಪುಸ್ತಕ ಓದಬೇಕಾದ ಕಣ್ಣುಗಳು ಟೀವಿ ಮುಂದೆ ಕುಳಿತು ತಮ್ಮತನ ಕಳೆದುಕೊಳ್ಳುತ್ತಿವೆ. ಮಹಿಳೆಯರು, ಮಕ್ಕಳು ಟೀವಿ ದಾಸರಾಗದೆ ಪುಸ್ತಕ ಸಂಸ್ಕೃತಿಯತ್ತ ಮರಳಬೇಕು. ಮಕ್ಕಳಿಗೆ ಕನ್ನಡ ಮಾಧ್ಯಮ ಶಿಕ್ಷಣದಿಂದ ಉನ್ನತ ಭವಿಷ್ಯ ಸಾಧ್ಯವಾಗದು ಎಂಬ ಭಾವನೆ ಶುದ್ಧ ತಪ್ಪು. ಕನ್ನಡ ಮಾಧ್ಯಮದ ಶಿಕ್ಷಣವೇ ಉತ್ತಮ. ಇದಕ್ಕೆ ತಾವೇ ನಿದರ್ಶನ, ನಾನು ಅಂದಿನಿಂದ ಪ್ರೀತಿಸಿ ಬೆಳೆದ ಕನ್ನಡ ಇಂದು ನನ್ನ ಕೈಹಿಡಿದಿದೆ ಎಂದರು. ಹಿಂದೂಸ್ತಾನಿ ಗಾಯಕ ಡಾ. ಎಂ. ವೆಂಕಟೇಶಕುಮಾರ, 'ಲೂಸಿಂಗ್ ಮೈ ರಿಲಿಜನ್' ಖ್ಯಾತಿಯ ಆಂಗ್ಲ ಕಾದಂಬರಿಕಾರ ವಿಶ್ವಾಸ ಮುದಗಲ್ ಮಾತನಾಡಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರ, ರತ್ನಕ್ಕ ಪಾಟೀಲ, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ, ವೀರಣ್ಣ ಜ್ಯೋತಿ, ಚಂದ್ರಶೇಖರ ಅರಳಿ ಮುಂತಾದವರು ಪಾಲ್ಗೊಂಡಿದ್ದರು. ಶಿವಾನುಭವ ಸಮಿತಿ ಚೇರ್‌ಮನ್ ಎಸ್.ಎನ್. ಆದಿ ಸ್ವಾಗತಿಸಿ, ನಿರೂಪಿಸಿದರು.