ಆರ್‌ಟಿಒ ಕಚೇರಿ ಹತ್ತಿರ ಬಸ್ ನಿಲುಗಡೆಗೆ ಆಗ್ರಹ
ಗದಗ: ಲಕ್ಷ್ಮೇಶ್ವರದಿಂದ ಗದಗ ನಗರಕ್ಕೆ ಬರುವಂತಹ ಬಸ್‌ಗಳು ನೂತನವಾಗಿ ನಿರ್ಮಾಣಗೊಂಡ ಪ್ರಾದೇಶಿಕ ಸಾರಿಗೆ ಕಚೇರಿ ಹತ್ತಿರ ನಿಲುಗಡೆಯಾಗದೆ ಇರುವುದರಿಂದ ಲಕ್ಷ್ಮೇಶ್ವರದಿಂದ ಬರುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕಾರಣ ಲಕ್ಷ್ಮೇಶ್ವರದಿಂದ ಗದಗ ನಗರಕ್ಕೆ ಬರುವಂತಹ ಎಲ್ಲ ಬಸ್‌ಗಳನ್ನು ಕೋರಿಕೆಯ ಮೇರೆಗೆ ಪ್ರಾದೇಶಿಕ ಸಾರಿಗೆ ಕಚೇರಿ ಹತ್ತಿರ ನಿಲುಗಡೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಮತ್ತು ಕೋರಿಕೆಯ ಮೇರೆಗೆ ನಿಲುಗಡೆ ಮಾಡಲು ನಾಮಫಲಕ ಅಳವಡಿಸುವುದು ಅತಿ ಅವಶ್ಯವಾಗಿದೆ. ಇನ್ನು ನಗರದಿಂದ ಜಿಲ್ಲಾ ಆಸ್ಪತ್ರೆಗೆ ಹೋಗುವ ನಗರ ಸಾರಿಗೆ ಬಸ್‌ಗಳು ಪ್ರಾದೇಶಿಕ ಕಚೇರಿವರೆಗೆ ಹೋಗಿ ಬರುವಂತಹ ವ್ಯವಸ್ಥೆ ಮಾಡಬೇಕು. ಇದರಿಂದ ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗಿ ಬರುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈಗ ಇರುವ ಬಸ್‌ಗಳು ಸಾಕಾಗಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಹೆಚ್ಚಿನ ಬಸ್‌ಗಳನ್ನು ಜಿಲ್ಲಾ ಆಸ್ಪತ್ರೆಗೆ ಹೋಗುವ ಬಸ್‌ಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿ ಸಮಯದಲ್ಲಿ ಬಸ್‌ಗಳನ್ನು ಬಿಡುವಂತಹ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಂಸ್ಥೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಅವರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸಂಸ್ಥೆಯಿಂದ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
--
ಭೀಷ್ಮ ಕೆರೆಹೂಳು ಎತ್ತಲು ಅವಕಾಶ ಕಲ್ಪಿಸಿ
ಗದಗ: ನಗರದ ಭೀಷ್ಮ ಕೆರೆಯ ಹೂಳು ತೆಗೆದರೆ ಮಳೆಗಾಲದ ಮಳೆ ನೀರಿನಿಂದ ತುಂಬುತ್ತದೆ. ಉದ್ಯಾನ ನಿರ್ಮಾಣಕ್ಕೂ ಅನುಕೂಲವಾಗಲಿದೆ.
ಹೂಳಿನಿಂದ ತುಂಬಿದ ಕೆರೆಯಲ್ಲಿ ಹೂಳು ತೆಗೆಯಲು ಗದಗ ಸುತ್ತ ಮುತ್ತಲಿನ ರೈತರ ವಾಹನಗಳಿಗೆ ಲೋಡಿಂಗ್ ಮಾಡಿಕೊಟ್ಟರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ. ಹೂಳು ಹೊರ ಹೋಗುತ್ತದೆ. ರೈತರು ತಮ್ಮ ಜಮೀನುಗಳಿಗೆ ಹೂಳು ಹೇರಿಸುವುದರಿಂದ ಜಮೀನಿನ ಫಲವತ್ತತೆಯು ಹೆಚ್ಚಾಗಿ ಹೆಚ್ಚಿನ ಬೆಳೆಯನ್ನೂ ಪಡೆಯಬಹುದಾಗಿದೆ. ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹ ಸಾಧ್ಯವಾಗುತ್ತದೆ. ಅವಳಿ ನಗರದಲ್ಲಿ ಅಂತರ ಜಲ ಹೆಚ್ಚಾಗಿ ನೀರಿನ ಬವಣೆ ಕಡಿಮೆಯಾಗುವುದು. ಈ ವಿಷಯವಾಗಿ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ಜಿಲ್ಲಾಧಿಕಾರಿಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.